ಹಾಸನ: ವೈವಾಹಿಕ ಸಮಾಲೋಚನೆಗೆ ಕರೆದಿದ್ದ ವೇಳೆ ಕೆ.ಆರ್.ಪುರಂ ಬಡಾವಣೆ ಪೊಲೀಸ್ ಠಾಣೆಯೊಳಗೆ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ವಿವಾಹೇತರ ಸಂಬಂಧವನ್ನು ಹೊಂದಿದ್ದಿ ಎಂದು ಪತಿ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಬಿಟ್ಟಗೌಡನ ಹಳ್ಳಿ ನಿವಾಸಿ ಶಿಲ್ಪಾ (23) ಮಹಿಳಾ ಠಾಣೆಯನ್ನು ಸಂಪರ್ಕಿಸಿ ಪತಿ ಹರೀಶ್ (27) ವಿರುದ್ಧ ದೂರು ದಾಖಲಿಸಿದ್ದಳು.
ಪೊಲೀಸರ ಪ್ರಕಾರ, ಭಾನುವಾರ ಮಧ್ಯಾಹ್ನ, ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಯನ್ನು ಪೊಲೀಸ್ ಠಾಣೆಗೆ ಕೌನ್ಸೆಲಿಂಗ್‌ಗಾಗಿ ಕರೆಸಲಾಗಿತ್ತು. ಈ ಸಮಯದಲ್ಲಿ ವ್ಯಕ್ತಿಯನ್ನು ಅವನ ನಡವಳಿಕೆ ಮತ್ತು ಅವನ ಹೆಂಡತಿಯ ಮೇಲೆ ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ಪ್ರಶ್ನಿಸಲಾಯಿತು.
ತನಗೆ ಬೇರೆಯವರೊಂದಿಗೆ ಸಂಬಂಧವಿದೆ ಎಂಬ ಅನುಮಾನದ ಮೇಲೆ ಪತಿ ತನ್ನೊಂದಿಗೆ ಆಗಾಗ್ಗೆ ಅನುಚಿತವಾಗಿ ವರ್ತಿಸುತ್ತಾನೆ ಮತ್ತು ತನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾನೆ ಎಂದು ಮಹಿಳೆ ಆರೋಪಿಸಿ ಆತನೊಂದಿಗೆ ಮನೆಗೆ ಹೋಗಲು ನಿರಾಕರಿಸಿದಳು.
ಕೋಪಗೊಂಡ ಪತಿ ಮನೆಯಿಂದ ತಂದಿದ್ದ, ತನ್ನ ಜೇಬಿನಲ್ಲಿದ್ದ ಚೂರಿಯನ್ನು ಹೊರತೆಗೆದು ಪೊಲೀಸ್ ಠಾಣೆಯೊಳಗೇ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಆಳವಾದ ಗಾಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಂಪತಿಗೆ ಒಂದು ಮಗುವಿದೆ.
ಠಾಣೆಯೊಳಗಿದ್ದ ಪೊಲೀಸ್ ಸಿಬಂದಿ ಆತನನ್ನು ತಡೆದು ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿಸಿದ್ದಾರೆ.