ಪುಣೆ (ಮಹಾರಾಷ್ಟ್ರ): 27ರ ಹರೆಯದ ಯುವಕನೋರ್ವ ತನ್ನ ಗರ್ಭಿಣಿ ಲಿವ್ ಇನ್ ಸಂಗಾತಿ ಜತೆಗೆ ಜಗಳವಾಡಿ ನಂತರ ಆಕೆಯನ್ನು ಹತ್ಯೆಗೈದು ಪೊಲೀಸರ ಮುಂದೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ರಂಜನ್ ಗಾಂವ್ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕರೇಗಾಂವ್ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಅನಂತರ ವ್ಯಕ್ತಿಯು ಪೊಲೀಸ್ ಠಾಣೆಗೆ ತೆರಳಿ ತನ್ನ 24ರ ಹರೆಯದ ಲಿವ್ ಇನ್ ಸಂಗಾತಿಯನ್ನು ಸ್ವತಃ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಯು ಪೊಲೀಸ್ ಠಾಣೆಗೆ ಬಂದು ಒಂದು ತುಂಡು ಕಾಗದ ಮತ್ತು ಪೆನ್ನು ಕೇಳಿದ. ಅನಂತರ ಆತ ಕಾಗದದಲ್ಲಿ ತಾನು ಖನ್ನತೆಯ ರೋಗಿಯಾಗಿದ್ದು, ತನ್ನ ಗರ್ಭಿಣಿ ಲಿವ್ ಇನ್ ಸಂಗಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಬೆರೆದುಕೊಂಡಿದ್ದು, ತನ್ನನ್ನು ಗಲ್ಲಿಗೇರಿಸಬೇಕೆಂದು ಕೋರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ; ನಿಯಮ ಮೀರಿ ರೆಸ್ಟೋರೆಂಟ್ ನಲ್ಲಿ ಡ್ಯಾನ್ಸ್, ಹುಕ್ಕಾ, ಮದ್ಯ: ಮಹಿಳೆಯರು ಸೇರಿ 97 ಮಂದಿ ಅಂದರ್
ಮೃತ ಮಹಿಳೆ ಮತ್ತು ಆರೋಪಿ ಕಳೆದ ನಾಲ್ಕೈದು ತಿಂಗಳಿನಿಂದ ಸಂಬಂಧದಲ್ಲಿದ್ದರು ಮತ್ತು ಈ ಅವಧಿಯಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಗರ್ಭಪಾತ ಮಾಡಿಸಿಕೊಳ್ಳಲು ಹಣವಿಲ್ಲದ ಕಾರಣ ಅವರು ಆಗಾಗ್ಗೆ ಜಗಳವಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಅವರ ನಡುವೆ ಇದೇ ವಿಷಯದಲ್ಲಿ ವಾಗ್ವಾದ ನಡೆದಾಗ ಆರೋಪಿಯು ಆಕ್ರೋಶದಿಂದ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಅನಂತರ ಹೊರಗಿನಿಂದ ಬಾಗಿಲನ್ನು ಲಾಕ್ ಮಾಡಿ ಪೊಲೀಸರ ಮುಂದೆ ಶರಣಗಿದ್ದಾನೆ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್‌ಪೆಕ್ಟರ್ ಶುಭಾಂಗಿ ಕುಟೆ ಹೇಳಿದ್ದಾರೆ.