ಮುಂಬಯಿ: ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ಬಳಿಕ ಸುದ್ದಿಯಲ್ಲಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬ ಮಣಿಪುರದ ಕುರಿತು ಸಿನಿಮಾ ಮಾಡಿ ಎಂದು ಸವಾಲು ಮಾಡಿದ್ದಾನೆ. ಇದಕ್ಕೆ ನಿರ್ದೇಶಕರು ಕೊಟ್ಟ ರಿಪ್ಲೈ ವೈರಲ್ ಆಗಿದೆ.
ಇತ್ತೀಚೆಗಷ್ಟೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು “‘The Kashmir Files Unreported’ ಎಂದು ಸಾಕ್ಷ್ಯ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದು ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ವೇಳೆ ಚಿತ್ರತಂಡ ಸಂಗ್ರಹಿಸಿದ ಕೆಲ ಅಂಶಗಳನ್ನು ಒಳಗೊಂಡಿದೆ. ಈ ಸಂಬಂಧ ನಿರ್ದೇಶಕ ವಿವೇಕ್ ಅವರು ಟ್ರೇಲರ್ ವೊಂದನ್ನು ರಿಲೀಸ್ ಮಾಡಿದ್ದರು.
ಮಣಿಪುರದಲ್ಲಿ ಕಳೆದ ಕೆಲ ದಿನಗಳಿಂದ ಆಗುತ್ತಿರುವ ಹಿಂಸಾಚಾರದ ಬಗ್ಗೆ ಗೊತ್ತೇ ಇದೆ. ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಹೇಯ ಕೃತ್ಯ ಬೆಳಕಿಗೆ ಬಂದ ಬಳಿಕ ಮಣಿಪುರದ ಹಿಂಸಾಚಾರ ಇಡೀ ದೇಶದಲ್ಲಿ ಮತ್ತೆ ಚರ್ಚೆಯಾಗಿದೆ.
ಇದೇ ಘಟನೆಯನ್ನಿಟ್ಟುಕೊಂಡು ಟ್ವಟರ್ ಬಳಕೆದಾರ ಒಬ್ಬ ನಿರ್ದೇಶಕ ವಿವೇಕ್ ಅವರಿಗೆ “ಸಮಯ ವ್ಯರ್ಥ ಮಾಡಬೇಡಿ, ನಿಮಗೆ ತಾಕತ್ತಿದ್ರೆ, ನೀವು ಗಂಡಸಾಗಿದ್ದರೆ ‘ಮಣಿಪುರ್ ಫೈಲ್ಸ್’ ಸಿನಿಮಾ ಮಾಡಿ” ಎಂದು ಸವಾಲು ಮಾಡಿದ್ದಾರೆ. ಇದಕ್ಕೆ ತನ್ನದೇ ಮಾತಿನಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ನನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಎಲ್ಲಾ ಸಿನಿಮಾನೂ ನನ್ನ ಹತ್ರನೇ ಮಾಡಿಸ್ತೀರಾ? ನಿನ್ನ “ಟೀಮ್ ಇಂಡಿಯಾ” ದಲ್ಲಿ ಸಿನಿಮಾ ಮಾಡಲು ಧೈರ್ಯವಿರುವ ಯಾವ ಗಂಡಸು ಇಲ್ವೇ?ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ಅನೌನ್ಸ್ ಮಾಡಿರುವ ‘The Kashmir Files Unreported’ ಡಾಕ್ಯುಮೆಂಟರಿ ಜೀ5 ನಲ್ಲಿ ಪ್ರಿಮಿಯರ್ ಆಗಲಿದೆ. ಆದರೆ ಇದರ ರಿಲೀಸ್ ಡೇಟ್ ಇನ್ನು ಅನೌನ್ಸ್ ಆಗಿಲ್ಲ. ಸದ್ಯ ವಿವೇಕ್ ಅಗ್ನಿಹೋತ್ರಿ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.