ಚಿಕ್ಕಬಳ್ಳಾಪುರ: ತನ್ನ ಬೊಲೇರಾ ವಾಹನದ ಟ್ಯಾಂಕ್ ತುಂಬ ಸಾವಿರಾರು ರೂಪಾಯಿ ಮೌಲ್ಯದ ಪೆಟ್ರೋಲ್ ತುಂಬಿಸಿಕೊಂಡು ಅದಕ್ಕೂ ಹಣ ಕೊಡದೇ ಬಳಿಕ ಬಂಕ್ ಕ್ಯಾಷಿಯರ್ ಬಳಿ ಇದ್ದ 14 ಸಾವಿರ ರೂ, ಹಣವನ್ನು ಎಗರಿಸಿ ಪರಾರಿಯಾಗಿದ್ದ ಖತರ್ ನಾಕ್ ಖದೀಮನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಘಟನೆ ನಡೆದು 24 ಗಂಟೆಗಳೊಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಇದೀಗ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ಧಾರವಾಡ ಜಿಲ್ಲೆಯ ನವಲಗುಂದದ ಈಶ್ವರ್ ಮಾಡವಾಲ್ ಬಿನ್ ರಾಮಪ್ಪ (34) ಎಂದು ಗುರುತಿಸಲಾಗಿದ್ದು ಈ ಆರೋಪಿಯು ಪ್ರಸ್ತುತ ಬೆಂಗಳೂರಿನ ವಿನಾಯಕ ನಗರದ ಅಂದರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಲಿಂಗದೀರನಹಳ್ಳಿಯ ವಾಸವಾಗಿದ್ದ.
ಕಳೆದ ಗುರುವಾರ ರಾತ್ರಿ 10:30ರ ಸಂದರ್ಭದಲ್ಲಿ ಆರೋಪಿ ಈಶ್ವರ್, ನಗರದ ಹೊರವಲಯದ ಬೆಂಗಳೂರು ಹೈದ್ರಾಬಾದ್ ರಾಷ್ಟ್ರೀಯ ಹಾರೋಬಂಡೆ ಸಮೀಪ ಇರುವ ಮಾರುತಿ ಎಂಟರ್ ಪ್ರೈಸಸ್ ಪೆಟ್ರೊಲ್ ಬಂಕ್‌ನಲ್ಲಿ ತಾನು ಚಲಾಯಿಸಿಕೊಂಡು ಬಂದಿದ್ದ ಬೊಲೇರಾ ವಾಹನಕ್ಕೆ 3,630 ರೂಪಾಯಿ ಮೌಲ್ಯದ ಪುಲ್ ಟ್ಯಾಂಕ್ ಇಂಧನ ತುಂಬಿಸಿದ್ದಾನೆ.
ಇಂಧನ ಭರ್ತಿ ಮಾಡಿದ ಬಳಿಕ ಆರೋಪಿ ಈಶ್ವರ್ ಕ್ಯಾಷಿಯರ್‌ಗೆ ಅದರ ಹಣ ಕೊಡದೇ ಸತಾಯಿಸಿದ್ದು ಮಾತ್ರವಲ್ಲದೇ ತನ್ನ ವಾಹನವನ್ನು ಕ್ಯಾಷಿಯರ್ ವಿನಯ್ ಕುಮಾರ್ ಮೇಲೆ ಹತ್ತಿಸಲು ಯತ್ನಿಸಿ ಕ್ಯಾಷಿಯರ್ ನನ್ನು ಭಯಭೀತಗೊಳಿಸಿ ಆತನ ಬಳಿಯಿದ್ದ 14,000 ರೂ, ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ಹುನೇಗಲ್ ನಿವಾಸಿ ವಿನಯ್ ಕುಮಾರ್ ಅವರು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದ್ದರು.