ಮುಂಬಯಿ:ಇಲ್ಲಿನ ವಿಮಾನ ನಿಲ್ದಾಣ ಸಮೀಪದ ಕಾರ್ಗೋ ಕಾಂಪ್ಲೆಕ್ಸ್ ನಲ್ಲಿ 4 ಕೋಟಿ ರೂಪಾಯಿ ಮೌಲ್ಯದ 700 ಗ್ರಾಂ ಹೆರಾಯಿನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಗುರುವಾರ ಗುಜರಾತ್ ನ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ನಕಲಿ ಮದ್ಯ ಕುಡಿದು 24 ಮಂದಿ ಸಾವು: ಮೂರು ತಂಡಗಳಿಂದ ತನಿಖೆ
ಮುಂಬಯಿಯ ಇಂಟರ್ ನ್ಯಾಷನಲ್ ಕೊರಿಯರ್ ಟರ್ಮಿನಲ್ ಪಾರ್ಸೆಲ್ ನಲ್ಲಿ ಡ್ರಗ್ಸ್ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ ವಲಯ ಘಟಕಕ್ಕೆ ಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧಾರದ ಮೇಲೆ ಕಾಂಪ್ಲೆಕ್ಸ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪ್ಯಾಕೇಟ್ ನಲ್ಲಿ 700 ಗ್ರಾಂಗಳಷ್ಟು ಬಿಳಿ ಪೌಡರ್ ಇದ್ದಿರುವುದು ಪತ್ತೆಯಾಗಿತ್ತು. ಇದು ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಎಂದು ವರದಿ ಹೇಳಿದೆ.
ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪಾರ್ಸೆಲ್ ಗುಜರಾತ್ ನ ವಡೋದರಾ ನಿವಾಸಿ ಕೃಷ್ಣ ಮುರಾರಿ ಪ್ರಸಾದ್ ಹೆಸರಿನಲ್ಲಿ ಇತ್ತು. ಈ ನಿಟ್ಟಿನಲ್ಲಿ ಪ್ರಸಾದ್ ಗೆ ಸಮನ್ಸ್ ನೀಡಿದ್ದು, ಅದರಂತೆ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋದ ಅಧಿಕಾರಿ ತಿಳಿಸಿದ್ದಾರೆ.
ತನಿಖೆಯ ನಂತರ ಪ್ರಸಾದ್ ನನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆರಾಯಿನ್ ಸಾಗಾಟ ಜಾಲ ಹಾಗೂ ಅಂತಾರಾಷ್ಟ್ರೀಯ ಅಕ್ರಮ ಸಾಗಾಟದ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.