ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಪೊಲೀಸರು ಮತ್ತು ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ವಾಸವಾಗಿದ್ದ ತಾಲಿಬ್ ಹುಸೇನ್ ಎಂಬಾತನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಜಮ್ಮು ನಿವಾಸಿ ತಾಲಿಬ್, ಎರಡು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತನ ವಿರುದ್ಧ ಜಮ್ಮುವಿನ ಕಿಸ್ತವಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನ್ನ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಜಮ್ಮುವಿನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ, ಶ್ರೀರಾಮಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ಇದನ್ನೂ ಓದಿ:ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಾಧು ಸಿಂಗ್ ಬಂಧನ
ಆರೋಪಿ ಪತ್ತೆಗಾಗಿ ಸುಮಾರು ಎರಡು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳೀಯ ಪೊಲೀಸರಿಗೆ ಆತನ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಆತನ ಸಂಬಂಧಿಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಸ್ಥಳೀಯ ಪೊಲೀಸರು, ಇತ್ತೀಚೆಗೆ ಆರೋಪಿ ಜಮ್ಮುವಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆ ಮಾಡಿದಾಗ ಬೆಂಗಳೂರನಲ್ಲಿರುವ ಮಾಹಿತಿ ನೀಡಿದ್ದಾನೆ.
ಈ ತಾಂತ್ರಿಕ ತನಿಖೆ ಆಧರಿಸಿ ಆರೋಪಿಯನ್ನು ಮೂರು ದಿನಗಳ ಹಿಂದೆ ಜಮ್ಮು-ಕಾಶ್ಮೀರ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಬೆಂಗಳೂರು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.