Advertisement

36 ವರ್ಷ ಹಿಂದೆ ಭತ್ತ ಕದ್ದಿದ್ದ ಆರೋಪಿ ಸೆರೆ!

11:02 PM Dec 15, 2019 | Team Udayavani |

ಧಾರವಾಡ: ಭತ್ತದ ಚೀಲ ಕದ್ದು ಪರಾರಿಯಾಗಿದ್ದ ಕಳ್ಳನನ್ನು 36 ವರ್ಷಗಳ ಬಳಿಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎತ್ತಿನಗುಡ್ಡದ ಶಂಕ್ರಪ್ಪ ಜೋಡಗೇರಿ ಬಂಧಿತ ಆರೋಪಿ. 1983ರಲ್ಲಿ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ರೈತ ಮುತಾಲಿಕ ದೇಸಾಯಿ ಎಂಬುವರ ಕಣದಲ್ಲಿ ಭತ್ತದ ಚೀಲಗಳನ್ನು ಕಳ್ಳತನ ಮಾಡಲಾಗಿತ್ತು.

Advertisement

ಎಂಟು ಜನರು ಕಣಕ್ಕೆ ನುಗ್ಗಿ ರೈತನನ್ನು ಕಟ್ಟಿ ಹಾಕಿ ಬೆಳಗಾಗುವವರೆಗೆ ಕಣದಲ್ಲಿದ್ದ ಭತ್ತದ ಹುಲ್ಲನ್ನು ಒಕ್ಕಣೆ ಮಾಡಿ 25 ಚೀಲ ಕಾಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, 7 ಜನ ಆರೋಪಿಗಳನ್ನು ಬಂಧಿಸಿದ್ದರು.

ಆದರೆ 8ನೇ ಆರೋಪಿ ಶಂಕ್ರಪ್ಪ ಜೊಡಗೇರಿ ಊರು ಬಿಟ್ಟಿದ್ದ. ನೆರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಈತ ಕೆಲ ವರ್ಷಗಳ ಹಿಂದೆ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದಲ್ಲಿ ಆಶ್ರಯ ಪಡೆದಿದ್ದ. ಈ ಮಾಹಿತಿ ಬೆನ್ನತ್ತಿ ಕಳೆದ 2 ತಿಂಗಳಿಂದ ಆರೋಪಿ ಶಂಕ್ರಪ್ಪನ ಬೆನ್ನು ಬಿದ್ದಿದ್ದ ಪೊಲೀಸರು, ಶನಿವಾರ ಯಲ್ಲಮ್ಮನ ಗುಡ್ಡದಲ್ಲಿ ಬಂಧಿ ಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

36 ವರ್ಷಗಳ ಹಿಂದೆ ಕಳ್ಳತನ ಮಾಡಿ ಸಿಕ್ಕು ಜೈಲು ಪಾಲಾಗಿದ್ದ 7 ಜನರು ಈಗ ಹೊರಗಡೆ ಬಂದಿದ್ದರೆ, ಈಗ ಸಿಕ್ಕಿರುವ ಶಂಕ್ರಪ್ಪ ಜೈಲು ಪಾಲಾಗಿದ್ದಾನೆ. ಪಿಎಸ್‌ಐ ಮಹೇಂದ್ರಕುಮಾರ ನಾಯಕ, ಎಎಸ್‌ಐ ಎಂ.ಎಂ. ಮಂಟೂರ, ಹೆಡ್‌ ಕಾನ್ಸ್‌ಟೇಬಲ್‌ ಸೋಮು ಹುಚ್ಚಣ್ಣವರ ಹಾಗೂ ತಂಡ ತನಿಖೆ ಕೈಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next