ಪುತ್ತೂರು: ಹಿರಿಯ ನಾಗರಿಕರನ್ನು ವಂಚಿಸಿ, ಚಿನ್ನಾಭರಣ ಕದಿಯುತ್ತಿದ್ದ ಆರೋಪಿ ಯನ್ನು ಶನಿವಾರ ಮಧ್ಯಾಹ್ನ ನಗರ ಪೊಲೀಸರು ಬಂಧಿಸಿದ್ದಾರೆ. ರವಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಟ್ವಾಳ ತಾಲೂಕಿನ ಕನ್ಯಾನದ ಕಣಿಯೂರು ನಿವಾಸಿ ಸುರೇಶ್ ನಾಯ್ಕ ಅಲಿಯಾಸ್ ರವಿ ನಾಯ್ಕ ಅಲಿಯಾಸ್ ಆನಂದ ನಾಯ್ಕ (51) ಬಂಧಿತ ಆರೋಪಿ. ಆತನಿಂದ 1.70 ಲಕ್ಷ ರೂ. ಮೌಲ್ಯದ 54 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಂಬಿಸಿ ವಂಚಿಸುತ್ತಿದ್ದ ಈತನ ವಿರುದ್ಧ ಪುತ್ತೂರು ಠಾಣೆಯಲ್ಲಿ ಎರಡು ಹಾಗೂ ಉಪ್ಪಿನಂಗಡಿಯಲ್ಲಿ ಒಂದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 3ರಂದು ಪುತ್ತೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಹಿರಿಯ ನಾಗರಿಕ ಮಹಿಳೆಯನ್ನು ವಂಚಿಸಿದ್ದ. ಸಂಬಂಧಿಕರೆಂದು ಪರಿಚಯ ಮಾಡಿಕೊಂಡು, ಇದೇ ರೀತಿಯ ಸರ ತನ್ನ ಹೆಂಡತಿಗೂ ಮಾಡಿಸಲಿಕ್ಕಿದೆ ಎಂದು ಹೇಳಿ ಸರ ಪಡೆದುಕೊಂಡಿದ್ದ. ಚಿನ್ನದ ಅಂಗಡಿಯವರಲ್ಲಿ ತೋರಿಸಿ ತರುತ್ತೇನೆಂದು ಕೊಂಡೊಯ್ದು, ಹಿಂದಿರುಗಿಲ್ಲ. ಕಾದು ಸುಸ್ತಾದ ವೃದ್ಧೆ, ಮನೆಯವರ ಮೂಲಕ ಪೊಲೀಸರ ಸಹಾಯ ಕೋರಿದ್ದರು. ಇನ್ನೊಂದು ಪ್ರಕರಣ ತಿಂಗಳ ಹಿಂದೆ ನಡೆದಿತ್ತು.
ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವೃದ್ಧರ ಬಳಿ ಸಂಬಂಧಿಕರೆಂದು ಪರಿಚಯ ಮಾಡಿಕೊಂಡಿದ್ದ. ಬಳಿಕ ಅವರ ಕಿವಿಯ ಆಭರಣವನ್ನು ಪಡೆದುಕೊಂಡು, ವಂಚಿಸಿದ್ದ ಎಂದು ಆರೋಪಿಸಲಾಗಿದೆ.
ಉಪ್ಪಿನಂಗಡಿಯಲ್ಲೂ ಇದೇ ರೀತಿಯ ಪ್ರಕರಣ ದಾಖಲಾಗಿದ್ದು, ವೃದ್ಧೆಗೆ ವಂಚನೆ ಮಾಡಿದ್ದ. ಇವರ ಬಳಿಯಿಂದ 5 ಪವನ್‌ನ ಚಂದನ ಮಾಲೆಯನ್ನು ಉಪಾಯವಾಗಿ ಎಗರಿಸಿದ್ದ ಎಂದು ದೂರಲಾಗಿದೆ.
ಆತನ ವಿರುದ್ಧ ಐಪಿಸಿ ಸೆಕ್ಷನ್ 163/17, 149/17, ಕಲಂ 417, 420ರಡಿ ಪ್ರಕರಣ ದಾಖಲಾಗಿದೆ. ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನಿರ್ದೇಶದಂತೆ ಅಪರಾಧ ವಿಭಾಗದ ಉಪನಿರೀಕ್ಷಕ ವೆಂಕಟೇಶ್ ಕೆ., ಪ್ರೊಬೇಷನರಿ ಎಸ್‌ಐ ರವಿ, ಸಿಬಂದಿ ಎಎಸ್‌ಐ ಚಿದಾನಂದ ರೈ, ಹೆಡ್‌ಕಾನ್‌ಸ್ಟೆಬಲ್ ಸ್ಕರಿಯಾ, ಮಂಜುನಾಥ, ಕಾನ್‌ಸ್ಟೆಬಲ್‌ಗಳಾದ ಪ್ರಸನ್ನ, ಪ್ರಶಾಂತ್ ರೈ ಮೊದಲಾದವರು ಕಾರ್ಯಾಚರಣೆ ನಡೆಸಿದ್ದಾರೆ.