ಬೆಂಗಳೂರು: ದುಬಾರಿ ಮೌಲ್ಯದ ಸೈಕಲ್ ಗಳು ಹಾಗೂ ಬೈಕ್‌ಗಳನ್ನು ಕಳ್ಳತನ ಮಾಡಿ ಫೇಸ್‌ಬುಕ್‌ನಲ್ಲಿ ಜಾಹೀರಾತು ಪ್ರಕಟಿಸಿ ಗ್ರಾಹಕರಿಗೆ ಶೋಧಿಸುತ್ತಿದ್ದ ಆರೋಪಿಯೊಬ್ಬ ಹುಳಿಮಾವು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹುಳಿಮಾವು ನಿವಾಸಿ ರಮೇಶ್ (21) ಬಂಧಿತ. ಆರೋಪಿಯಿಂದ 4.50 ಲಕ್ಷ ರೂ. ಮೌಲ್ಯದ 6ಕ್ಕೂ ಅಧಿಕ ದುಬಾರಿ ಮೌಲ್ಯದ ಸೈಕಲ್‌ಗಳು, 4.40 ಲಕ್ಷ ರೂ. ಮೌಲ್ಯದ 8 ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ.
ಆರೊಪಿಯು ಮನೆ ಮುಂದೆ ನಿಲುಗಡೆ ಮಾಡುತ್ತಿದ್ದ ಐಷಾರಾಮಿ ಸೈಕಲ್‌ಗಳನ್ನು ಗುರುತಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ. ಜತೆಗೆ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ. ಬೈಕ್ ಖರೀದಿಸಲು ಬರುವ ಗಿರಾಕಿಗಳ ಬಳಿ ಆರ್‌ಸಿ ಬುಕ್ ತಡವಾಗಿ ಕೊಡುವುದಾಗಿ ಹೇಳಿ ಅತೀ ಕಡಿಮೆ ಮೊತ್ತಕ್ಕೆ ಮಾರುತ್ತಿದ್ದ. ಕದ್ದ ಸೈಕಲ್ ಗಳ ಫೋಟೋಗಳನ್ನು ಫೇಸ್ ಬುಕ್‌ನಲ್ಲಿ ಹಾಕಿ ಮಾರಾಟಕ್ಕಿದೆ ಎಂದು ಪೋಸ್ಟ್ ಮಾಡುತ್ತಿದ್ದ.
ಇದನ್ನೂ ಓದಿ:ಪೋರ್ನ್ ವಿಡಿಯೋ ವೆಬ್‌ಸೈಟ್ ನಿಷೇಧಿಸಿದ್ದರೂ ಸಿಗುತ್ತಿವೆ ಮಕ್ಕಳ ಅಶ್ಲೀಲ ದೃಶ್ಯ ತುಣುಕುಗಳು
ಇತ್ತೀಚೆಗೆ ಹುಳಿಮಾವು ನಿವಾಸಿಯೊಬ್ಬರ ಸೈಕಲ್‌ನ್ನು ಕದ್ದು, ಅದರ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಫೇಸ್‌ಬುಕ್‌ನಲ್ಲಿ ಅದನ್ನು ಗಮನಿಸಿದ್ದ ಸೈಕಲ್ ಮಾಲಿಕ, ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿ ದ್ದರು. ಪೊಲೀಸರು ಸಿಸಿ ಕ್ಯಾಮೆರಾ ಹಾಗೂ ತಾಂತ್ರಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.