ಪುಣೆ: ದಕ್ಷಿಣ ಕೊರಿಯಾ ಮೂಲದ ವ್ಲಾಗರ್ ಗೆ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆದ ಬಳಿಕ ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಸೌತ್ ಕೊರಿಯಾದ ಮೂಲದ ಯೂಟ್ಯೂಬರ್ ಕೆಲ್ಲಿ ಎನ್ನುವಾಕೆ ಪುಣೆಗೆ ಬಂದಿದ್ದರು. ಈ ವೇಳೆ ಅವರು ವ್ಲಾಗ್ ವಿಡಿಯೋ ಮಾಡುತ್ತಾ ಮಾರುಕಟ್ಟೆಯಲ್ಲಿ ಸುತ್ತಾಡಿದ್ದರು. ಸ್ಥಳೀಯ ಅಂಗಡಿಯೊಂದರಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರೊಂದಿಗೆ ಮಾತನಾಡುತ್ತಿರುವ ವೇಳೆ ಹಿಂದಿನಿಂದ ಒಮ್ಮೆಗೆ ಇಬ್ಬರು ಬಂದು ಕೆಲ್ಲಿ ಹೆಗಲ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ.
ಕೂಡಲೇ ಕೆಲ್ಲಿ ಅಲ್ಲಿಂದ ಈಚೆಗೆ ಬಂದಿದ್ದಾರೆ. “ನಾನು ಇಲ್ಲಿಂದ ಓಡಬೇಕು” ಎಂದು ಕೆಲ್ಲಿ ಹೇಳುವ ಮಾತು ವಿಡಿಯೋದಲ್ಲಿ ಸೆರೆಯಾಗಿದೆ.
ಕೆಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಪಿಂಪ್ರಿ-ಚಿಂಚ್‌ವಾಡ್ ಪ್ರದೇಶಕ್ಕೆ ಬಂದಿದ್ದರು. ಈ ವೇಳೆಗಿನ ವಿಡಿಯೋವನ್ನು ಕಳೆದ ವಾರ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ವರ್ತಿಸಿರುವವರ ಕ್ಲಿಪಿಂಗ್ ವೈರಲ್ ಆಗಿತ್ತು.
ಇದಕ್ಕೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಭರತ್ ಉಂಚಾಲೆ ಎಂದು ಗುರುತಿಸಲಾಗಿದ್ದು, ಈತ ಮೂಲತಃ ಕರ್ನಾಟಕದ ಬೀದರ್‌ನವನು ಎಂದು ವರದಿ ತಿಳಿಸಿದೆ.
ಇದೇ ರೀತಿಯ ಘಟನೆಯಲ್ಲಿ, ಮುಂಬೈನಲ್ಲಿ ದಕ್ಷಿಣ ಕೊರಿಯಾದ ಮತ್ತೊಬ್ಬ ವ್ಲಾಗರ್‌ಗೆ ಕಿರುಕುಳ ನೀಡಿದ ಇಬ್ಬರು ವ್ಯಕ್ತಿಗಳನ್ನು ಕಳೆದ ವರ್ಷ ಬಂಧಿಸಲಾಗಿತ್ತು.