ಸೂರತ್: ಉಗ್ರ ನಿಗ್ರಹ ದಳದ ಗುಜರಾತ್ ಪಡೆಯು ಗುತ್ತಿಗೆ ಕೆಲಸಗಾರನನ್ನು ಬಂಧಿಸಿದ್ದು, ಆತ ಪಾಕಿಸ್ತಾನದ ಏಜೆಂಟ್ ಗೆ ಭಾರತೀಯ ಕೋಸ್ಟ್ ಗಾರ್ಡ್ (ICG) ಹಡಗುಗಳ ಚಲನವಲನದ ಬಗ್ಗೆ ಮಾಹಿತಿ ರವಾನಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಆರೋಪಿಯನ್ನು ದೀಪೇಶ್ ಗೋಹಿಲ್ ಎಂದು ಗುರುತಿಸಲಾಗಿದೆ. ಮಾಹಿತಿ ನೀಡುತ್ತಿದ್ದಕ್ಕೆ ಪಾಕ್ ಏಜೆಂಟ್ ಈತನಿಗೆ ಪ್ರತಿನಿತ್ಯ 200 ರೂ ನೀಡುತ್ತಿದ್ದ. ಪಾಕ್ ಏಜೆಂಟ್ ಬಳಿಯಿಂದ ದೀಪೇಶ್ ಒಟ್ಟು 42 ಸಾವಿರ ರೂ ಹಣ ಪಡೆದಿದ್ದಾನೆ.
ದೀಪೇಶ್ ಓಖಾ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ. ಪಾಕಿಸ್ತಾನಿ ಗೂಢಚಾರಿಯೊಂದಿಗೆ ಫೇಸ್ಬುಕ್ ಮೂಲಕ ಸಂಪರ್ಕ ಹೊಂದಿದ್ದನು.
ಗೂಢಚಾರರು ‘ಸಹಿಮಾʼ ಎಂಬ ಬದಲಿ ಹೆಸರು ಬಳಸಿದ್ದು, ಫೇಸ್ಬುಕ್ನಲ್ಲಿ ದೀಪೇಶ್ ಜತೆ ಸ್ನೇಹ ಬೆಳೆಸಿದ ಬಳಿಕ ವಾಟ್ಸ್ಆ್ಯಪ್ನಲ್ಲಿ ಸಂಪರ್ಕದಲ್ಲಿದ್ದರು. ಓಖಾ ಬಂದರಿನಲ್ಲಿರುವ ಕೋಸ್ಟ್ ಗಾರ್ಡ್ ಬೋಟ್ನ ಹೆಸರು ಮತ್ತು ಸಂಖ್ಯೆಯನ್ನು ಏಜೆಂಟ್ ದೀಪೇಶ್ಗೆ ಕೇಳಿದ್ದರು. ಪಾಕ್ ಏಜೆಂಟ್ ನ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಗುಜರಾತ್ ಎಟಿಎಸ್ ಅಧಿಕಾರಿ ಕೆ ಸಿದ್ಧಾರ್ಥ್ ಮಾತನಾಡಿ, ಓಖಾ ಮೂಲದ ವ್ಯಕ್ತಿಯೊಬ್ಬರು ಕೋಸ್ಟ್ ಗಾರ್ಡ್ ಬೋಟ್ ಕುರಿತು ಪಾಕಿಸ್ತಾನದ ನೌಕಾಪಡೆ ಅಥವಾ ಐಎಸ್ಐ ಏಜೆಂಟ್ನೊಂದಿಗೆ ವಾಟ್ಸಾಪ್ ಮೂಲಕ ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸಿದೆವು. ತನಿಖೆಯ ನಂತರ ನಾವು ಓಖಾ ನಿವಾಸಿ ದೀಪೇಶ್ ಗೋಹಿಲ್ ಎಂಬಾತನನ್ನು ಬಂಧಿಸಿದ್ದೇವೆ. ದೀಪೇಶ್ ಸಂಪರ್ಕದಲ್ಲಿದ್ದ ನಂಬರ್ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ ಎಂದರು.
ಎಟಿಎಸ್ ಪ್ರಕಾರ, ಓಖಾ ಬಂದರಿನಲ್ಲಿರುವ ಹಡಗುಗಳಿಗೆ ದೀಪೇಶ್ ಸುಲಭ ಪ್ರವೇಶವನ್ನು ಹೊಂದಿದ್ದರು.
ಪಾಕಿಸ್ತಾನಿ ಗೂಢಚಾರರಿಗೆ ಮಾಹಿತಿ ನೀಡಿದ್ದಕ್ಕೆ ದಿನಕ್ಕೆ 200 ರೂಪಾಯಿ ಪಡೆಯುತ್ತಿದ್ದ ಆತ, ಖಾತೆ ಇಲ್ಲದ ಕಾರಣ ತನ್ನ ಸ್ನೇಹಿತನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ವೆಲ್ಡಿಂಗ್ ಕೆಲಸಕ್ಕೆ ಹಣ ಎಂದು ಹೇಳಿ ತನ್ನ ಸ್ನೇಹಿತನಿಂದ ನಗದು ರೂಪದಲ್ಲಿ ಹಣ ಪಡೆದಿದ್ದ. ಏಜೆಂಟರಿಂದ 42 ಸಾವಿರ ರೂ. ಪಡೆದಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ, ಕೋಸ್ಟ್ ಗಾರ್ಡ್ ಬೋಟ್ ಬಗ್ಗೆ ಪಾಕಿಸ್ತಾನದ ಗೂಢಚಾರರಿಗೆ ಮಾಹಿತಿ ರವಾನಿಸಿದ್ದಕ್ಕಾಗಿ ಗುಜರಾತ್ ಎಟಿಎಸ್ ಪೋರಬಂದರ್ನಿಂದ ಪಂಕಜ್ ಕೋಟಿಯಾ ಎಂಬ ವ್ಯಕ್ತಿಯನ್ನು ಬಂಧಿಸಿತ್ತು.