ಇಸ್ರೇಲ್: ಸಾಮಾಜಿಕ ಜಾಲತಾಣ ಯಾವೆಲ್ಲ ಅವಾಂತರಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಫೇಸ್ ಬುಕ್ ನಲ್ಲಿ ಗುಡ್ ಮಾರ್ನಿಂಗ್ ಎಂದು ಫೋಸ್ಟ್ ಮಾಡಿದ್ದ ವ್ಯಕ್ತಿ ಬಂಧನಕ್ಕೀಡಾದ ಪ್ರಸಂಗ ಇಸ್ರೇಲ್ ನಲ್ಲಿ ನಡೆದಿದೆ! ಅದಕ್ಕೆ ಕಾರಣ ಫೇಸ್ ಬುಕ್ ಸಾಫ್ಟ್ ವೇರ್ ನ ತಪ್ಪು ಟ್ರಾನ್ಸ್ ಲೇಟ್(ತರ್ಜುಮೆ)!
ಏನಿದು ಫೇಸ್ ಬುಕ್ ಅವಾಂತರ!
ಪ್ಯಾಲೆಸ್ತೇನಿಯಾದ ಕಟ್ಟಡ ನಿರ್ಮಾಣ ಗುತ್ತಿಗೆದಾರರೊಬ್ಬರು ಬುಲ್ಡೋಜರ್ ಸಮೀಪ ಕೈಯಲ್ಲೊಂದು ಸಿಗರೇಟ್ ಜತೆಗೆ ಟೀ ಕಪ್ ಹಿಡಿದುಕೊಂಡಿದ್ದ ಫೋಟೋವನ್ನು ಫೇಸ್ ಬುಕ್ ನಲ್ಲಿ ಗುಡ್ ಮಾರ್ನಿಂಗ್ ಎಂದು ಅರೆಬಿಕ್ ಭಾಷೆಯಲ್ಲಿ ಬರೆದು ಪೋಸ್ಟ್ ಮಾಡಿದ್ದರು.
ಅರೆಬಿಕ್ ಭಾಷೆಯಲ್ಲಿ ಗುಡ್ ಮಾರ್ನಿಂಗ್ ಎಂದು ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದು ಆದರೆ ಟ್ರಾನ್ಸ್ ಲೇಟ್ ಸಾಫ್ಟ್ ವೇರ್ ಯಡವಟ್ಟನಿಂದ ಅದು “ದಾಳಿ ನಡೆಸಿ ಎಂದು ಫೋಸ್ಟ್ ಆಗಿತ್ತು!
ಬುಲ್ಡೋಜರ್ ಚಿತ್ರದ ಜತೆ ನಿಂತು ಫೋಟೋ ಹಾಕಿ ಅಟ್ಯಾಕ್ ಮಾಡಿ ಎಂದು ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿರುವುದನ್ನು ಪೊಲೀಸರಿಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು ಎಂದು ಹಾರೆಟ್ಜ್ ವರದಿ ಮಾಡಿದೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರಬೇಕೆಂದು ಗ್ರಹಿಸಿದ ಪೊಲೀಸರು ಪ್ಯಾಲೆಸ್ತೇನಿನ ಹಾಲಾವಿಮ್ ಹಾಲ್ವಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಅಂತೂ ಕೊನೆಗೂ ಅದು ಫೇಸ್ ಬುಕ್ ಟ್ರಾನ್ಸ್ ಲೇಟ್ ಸಾಫ್ಟ್ ವೇರ್ ತಪ್ಪಿನಿಂದಾಗಿ ಈ ಯಡವಟ್ಟು ನಡೆದಿದೆ ಎಂಬುದು ಪೊಲೀಸರಿಗೆ ಮನವರಿಕೆಯಾದ ಬಳಿಕ ಆತನನ್ನು ಬಿಡುಗಡೆಗೊಳಿಸಿರುವುದಾಗಿ ವರದಿ ತಿಳಿಸಿದೆ. ತದನಂತರ ಆ ವ್ಯಕ್ತಿ ಫೇಸ್ ಬುಕ್ ಪೋಸ್ಟ್ ಅನ್ನು ಡಿಲೀಟ್ ಮಾಡಿರುವುದಾಗಿ ವರದಿ ವಿವರಿಸಿದೆ.