Advertisement

Inside: 90ರ ದಶಕದ ಮಾದಕ ನಟಿ ಮಮತಾ ಕುಲಕರ್ಣಿ ಇಂದಿಗೂ ನಾಪತ್ತೆಯಾಗಿರುವುದೇಕೆ?

06:45 PM Jan 02, 2021 | Team Udayavani |

2020ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ನಂತರ ಬಾಲಿವುಡ್ ಅಂಗಳದಲ್ಲಿ ಡ್ರಗ್ಸ್ ಜಾಲದ ನಂಟು ಅಂಟಿಕೊಂಡಿದ್ದರ ಪರಿಣಾಮ ಖ್ಯಾತ ನಟ, ನಟಿಯರ ಹೆಸರು ಮುನ್ನಲೆಗೆ ಬಂದಿತ್ತು. ಸ್ಯಾಂಡಲ್ ವುಡ್ ನಲ್ಲಿಯೂ ನಟಿ ರಾಗಿಣಿ, ಸಂಜನಾ ಜೈಲುಕಂಬಿ ಎಣಿಸುವಂತಾಯ್ತು. ಮರೆತು ಹೋದ ಸಂಗತಿ ಎಂದರೆ 1990ರ ದಶಕದಲ್ಲಿ ಬಾಲಿವುಡ್ ನ ಮಾದಕ ನಟಿ ಎಂದೇ ಖ್ಯಾತಳಾಗಿದ್ದ ಮಮತಾ ಕುಲಕರ್ಣಿ 2000ನೇ ಇಸವಿಯಲ್ಲಿ ಕೋಟ್ಯಂತರ ರೂಪಾಯಿ ಮಾದಕ ವಸ್ತುಗಳ ಜಾಲದ ಜತೆ ನಂಟು ಹೊಂದಿರುವುದು ಬಯಲಿಗೆ ಬಂದಿತ್ತು. ಸ್ಟಾರ್ ನಟಿಯಾಗಿದ್ದವಳು ದಿಢೀರ್ ನಾಪತ್ತೆಯಾಗಿದ್ದೇಕೆ? ಆಕೆ ವಹಿವಾಟಿನ ಹಿಂದೆ ಇದ್ದವರು ಯಾರು ಎಂಬುದು ಕುತೂಹಲಹಕಾರಿ ವಿಷಯ!

Advertisement

ಮಮತಾ ಕುಲಕರ್ಣಿ 1972ರ ಏಪ್ರಿಲ್ 20ರಂದು ಮಹಾರಾಷ್ಟ್ರದಲ್ಲಿ ಜನಿಸಿದ್ದಳು. 1992ರ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಸಿನಿಮಾ, ರಾಜ್ ಕುಮಾರ್ (ಹಿಂದಿ), ನಾನಾಪಾಟೇಕರ್ ನಟನೆಯ ತಿರಂಗಾ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕುಲಕರ್ಣಿ ಬೆಳ್ಳಿಪರದೆಗೆ ಪ್ರವೇಶಿಸಿದ್ದಳು. ಬಾಲಿವುಡ್ ನ ಸ್ಟಾರ್ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್, ಗೋವಿಂದ್ ಜತೆ ಮಮತಾ ನಟಿಸಿದ್ದಳು. ಜೂಹಿ ಚಾವ್ಲಾ ಮತ್ತು ಮಾಧುರಿ ದೀಕ್ಷಿತ್ ಮ್ಯಾಗಜೀನ್ ಗಳಿಗೆ ಟಾಪ್ ಲೆಸ್ ಫೋಟೋ ಶೂಟ್ ಅನ್ನು ನಿರಾಕರಿಸಿದ್ದ ನಂತರ ಅದನ್ನೇ ಸವಾಲಾಗಿ ಸ್ವೀಕರಿಸಿದ್ದ ಮಮತಾ ಮ್ಯಾಗಜೀನ್ ಗಳಲ್ಲಿ ಅರೆ ಬೆತ್ತಲೆ ಫೋಟೋಗಳಿಂದ ಮಿಂಚಿದ್ದಳು!

ಟಾಪ್ ಲೆಸ್ ಉಡುಗೆಯ ನಂತರ ಮಮತಾ ಕುಲಕರ್ಣಿ ವಿವಾದದಲ್ಲಿಯೇ ಹೆಚ್ಚು ಪ್ರಚಾರದಲ್ಲಿರತೊಡಗಿದ್ದಳು. ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಮಮತಾ ಬಾಲಿವುಡ್ ನಲ್ಲಿ ಬಾಂಬ್ ಶೆಲ್ ಎಂದೇ ಖ್ಯಾತಳಾಗಿದ್ದಳು. ಆದರೆ 2000ನೇ ಇಸವಿಯಲ್ಲಿ ದಿಢೀರ್ ನಾಪತ್ತೆಯಾಗಿಬಿಟ್ಟಿದ್ದಳು. ಅದಕ್ಕೆ ಕಾರಣವಾಗಿದ್ದು ಡ್ರಗ್ಸ್ ಮಾಫಿಯಾ!

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಕಿಂಗ್ ವಿಕಿ ಜತೆ ನಂಟು!

Advertisement

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್ ವಿಕಿ ಗೋಸ್ವಾಮಿಯನ್ನು ದುಬೈ ಪೊಲೀಸರು ಬಂಧಿಸಿದ್ದರು. 11.5 ಟನ್ ಮ್ಯಾಂಡ್ರಕ್ಸ್ ಕಳ್ಳಸಾಗಣೆ ಮಾಡಿದ ಕಾರಣಕ್ಕೆ ದುಬೈನಲ್ಲಿ ವಿಕಿ ಗೋಸ್ವಾಮಿಗೆ 16 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣದಲ್ಲಿ ಮಮತಾ ಕುಲಕರ್ಣಿ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದ್ದು, ಈಕೆ 2000 ಸಾವಿರ ಕೋಟಿ ರೂಪಾಯಿ ಡ್ರಗ್ಸ್ ಜಾಲದ ಹಿಂದಿನ ರೂವಾರಿಯಾಗಿದ್ದಳು.

1997ರಲ್ಲಿ ದುಬೈ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ ವಿಕಿ ಗೋಸ್ವಾಮಿಯನ್ನು ಜೈಲಿನಿಂದ ಹೊರತರಲು ಮಮತಾ ಕುಲಕರ್ಣಿ ತನ್ನ ಬದುಕಿನಲ್ಲಿ ದುಡಿದ ಹಣವನ್ನೆಲ್ಲಾ ವ್ಯಯಿಸಿಬಿಟ್ಟಿದ್ದಳು. ಈ ಸಂದರ್ಭದಲ್ಲಿಯೇ ಮಮತಾ ವಿಕಿಯನ್ನು ರಹಸ್ಯವಾಗಿ ಮದುವೆಯಾಗಿದ್ದಳು. ಅಲ್ಲದೇ ಇಸ್ಲಾಂಗೆ ಮತಾಂತರಗೊಂಡಿದ್ದ ಈಕೆ ತನ್ನ ಹೆಸರನ್ನು ಆಯೇಷಾ ಬೇಗಂ ಎಂದು ಬದಲಾಯಿಸಿಕೊಂಡಿದ್ದಳು. ವಿಕ ಗೋಸ್ವಾಮಿ ಯೂಸೂಫ್ ಅಹ್ಮದ್ ಎಂದು ಹೆಸರು ಬದಲಿಸಿಕೊಂಡಿದ್ದ!

ಸುಮಾರು 16 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದ ವಿಕಿ ಗೋಸ್ವಾಮಿ ದುಬೈ ಜೈಲಿನಿಂದ ಬಿಡುಗಡೆಗೊಂಡಿದ್ದ. ಈತನ ಬಿಡುಗಡೆ ಆಫ್ರಿಕಾದ ಮಾಧ್ಯಮಗಳಲ್ಲಿ ದೊಡ್ಡ ಸಂಚಲನ ಸೃಷ್ಟಿಸಿಬಿಟ್ಟಿತ್ತು. ಯಾಕೆಂದರೆ ವಿಕಿ ಗೋಸ್ವಾಮಿ ಜಿಂಬಾಬ್ವೆ ಡ್ರಗ್ ಮಾಫಿಯಾ ದೊರೆ ವಾಲ್ಡೆನ್ ಫಿಂಡ್ಲೈ ಜತೆ ಪಾರ್ಟನರ್ ಆಗಿದ್ದ. ಇಡೀ ಆಫ್ರಿಕನ್ ದೇಶ ಹಾಗೂ ಮುಂಬೈಗೆ ವಿಕಿ ಗೋಸ್ವಾಮಿ ಮಾದಕ ವಸ್ತು ಹಂಚಿಕೆಯ ಪ್ರಮುಖ ಸೂತ್ರಧಾರನಾಗಿದ್ದ.

ಕೊನೆಗೂ 2012ರಲ್ಲಿ ವಿಕಿ ಮತ್ತು ಮಮತಾ ಕೀನ್ಯಾಕ್ಕೆ ತೆರಳಿದ್ದರು. 1994ರಲ್ಲಿಯೇ ಗುಜರಾತ್ ನ ವಿಕಿ ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದ, ಅಪಾರ ಪ್ರಮಾಣದ ಆಸ್ತಿ, ಐಶಾರಾಮಿ ಕಾರುಗಳನ್ನು ಹೊಂದಿದ್ದ. 2014ರಲ್ಲಿ ಮತ್ತೆ ಕೀನ್ಯಾ ಪೊಲೀಸರು ಮಮತಾ ಮತ್ತು ವಿಕಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

2016ರಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲದ ಕುರಿತು ತನಿಖೆ ನಡೆಸಿದ್ದ ಮುಂಬೈನ ಥಾಣೆ ಕ್ರೈಂ ಬ್ರ್ಯಾಂಚ್ ಪೊಲೀಸರು 2017ರ ಜೂನ್ ನಲ್ಲಿ ಮಮತಾ ಮತ್ತು ವಿಕಿ ತಲೆ ಮರೆಯಿಸಿಕೊಂಡ ಆರೋಪಿಗಳು ಎಂದು ನೋಟಿಸ್ ಜಾರಿಗೊಳಿಸಿದ್ದರು. ಕೋರ್ಟ್ ಕೂಡಾ ಮಮತಾ ಆಸ್ತಿಯನ್ನು ಮಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಏತನ್ಮಧ್ಯೆ ಮಮತಾ ತಾನು ವಿಕಿಯನ್ನು ವಿವಾಹವಾಗಿಲ್ಲ, ವಿಕಿ ಅಮಾಯಕ ಆತನನ್ನು ಸಂಚು ರೂಪಿಸಿ ಸಿಲುಕಿಸಲಾಗಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಳು!

ಬಾಲಿವುಡ್ ನಲ್ಲಿ ಮಿಂಚಿದ್ದ ಮಮತಾ ಕುಲಕರ್ಣಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಮಾಫಿಯಾ ಜಾಲದ ಜತೆ ಸೇರಿ ತಾನೂ ಜೈಲು ಸೇರಿ ಇದೀಗ ಕೀನ್ಯಾ ದೇಶದಲ್ಲಿ ವಾಸವಾಗಿರುವುದಾಗಿ ಕೆಲವು ವರದಿಗಳು ತಿಳಿಸಿವೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next