Advertisement

ಮುಗುರುಜಾ, ಡಿಮಿಟ್ರೋವ್‌ ಸಿನ್ಸಿನಾಟಿ ಚಾಂಪಿಯನ್ಸ್‌

08:05 AM Aug 22, 2017 | Team Udayavani |

ಸಿನ್ಸಿನಾಟಿ: ಸಿನ್ಸಿನಾಟಿ ಟೆನಿಸ್‌ ಪಂದ್ಯಾವಳಿಯಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಗಾರ್ಬಿನ್‌ ಮುಗುರುಜಾ ಮತ್ತು ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಪ್ರಶಸ್ತಿಯನ್ನೆತ್ತಿದ್ದಾರೆ. ಫೈನಲ್‌ ಕಾಳಗದಲ್ಲಿ ಸೋಲನುಭವಿಸಿದವರೆಂದರೆ ನಂಬರ್‌ ವನ್‌ ಹಾದಿಯಲ್ಲಿದ್ದ ಸಿಮೋನಾ ಹಾಲೆಪ್‌ ಮತ್ತು ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌.

Advertisement

ವನಿತಾ ಸಿಂಗಲ್ಸ್‌ ನಲ್ಲಿ ಸ್ಪೇನಿನ ಗಾರ್ಬಿನ್‌ ಮುಗುರುಜಾ ರೊಮೇ ನಿಯಾದ ಸಿಮೋನಾ ಹಾಲೆಪ್‌ ಅವರನ್ನು 6-1, 6-0 ಅಂತರದಿಂದ ನಿರೀಕ್ಷೆಗಿಂತಲೂ ಸುಲಭದಲ್ಲಿ ಸೋಲಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಗ್ರೆಗರ್‌ ಡಿಮಿಟ್ರೋವ್‌ 6-3, 7-5ರಿಂದ ನಿಕ್‌ ಕಿರ್ಗಿಯೋಸ್‌ ಅವರನ್ನು ಹಿಮ್ಮೆಟ್ಟಿಸಿದರು.

ಕೇವಲ 56 ನಿಮಿಷಗಳ ಪಂದ್ಯ!
6ನೇ ಶ್ರೇಯಾಂಕಿತೆ ಮುಗು ರುಜಾ ಕೇವಲ 56 ನಿಮಿಷಗಳಲ್ಲಿ ಹಾಲೆಪ್‌ಗೆ ಸೋಲಿನ ರುಚಿ ತೋರಿಸಿದರು. “ರೂಕ್‌ವುಡ್‌ ಕಪ್‌’ ಜತೆಗೆ 522,450 ಡಾಲರ್‌ ಬಹುಮಾನ ಗಿಟ್ಟಿಸಿದರು.  “ಈವರೆಗೆ ಅಮೆರಿಕದ ಗಾಳಿ ನನ್ನತ್ತ ಬೀಸಿರಲಿಲ್ಲ. ಕೊನೆಗೂ ಈ ವರ್ಷ ಸುಳಿದಿದೆ. ಇಲ್ಲಿಂದ ನಾನು ಸುಧಾರಿತ ಪ್ರದರ್ಶನ ನೀಡಬೇಕು…’ ಎಂದು ಮುಗುರುಜಾ ಪ್ರತಿಕ್ರಿಯಿಸಿದರು. 

ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಹಿನ್ನೆಲೆ ಯಲ್ಲಿ ಸಿಮೋನಾ ಹಾಲೆಪ್‌ ಪಾಲಿಗೆ ಇದು ಭಾರೀ ಆಘಾತವಾಗಿ ಪರಿಣಮಿಸಿದೆ. ಇಲ್ಲಿ ಜಯಿಸಿದ್ದೇ ಆದರೆ ಅವರು ವಿಶ್ವದ ನಂ.1 ಆಟಗಾರ್ತಿ ಆಗಿ ಮೂಡಿ ಬರುತ್ತಿದ್ದರು. ಇದೂ ಸೇರಿದಂತೆ ಈ ವರ್ಷ ಹಾಲೆಪ್‌ ಮುಂದಿದ್ದ 3 “ನಂಬರ್‌ ವನ್‌’ ಅವಕಾಶಗಳು ಕೈಜಾರಿದಂತಾದವು. ಈಗ ಗಾರ್ಬಿನ್‌ ಮುಗುರುಜಾ ಈ ಪಟ್ಟಕ್ಕೆ ಹತ್ತಿರವಾಗಿದ್ದಾರೆ.

“ಈ ಸೋಲು ನಿಜಕ್ಕೂ ನಾಚಿಕೆಗೇಡು. ಬಹುಶಃ ನಾನು ಒತ್ತಡಕ್ಕೆ ಸಿಲುಕುತ್ತಿದ್ದೇನೆ. ಆದರೆ ಇದು ಯಾವ ರೀತಿಯ ಒತ್ತಡ ಎಂಬುದನ್ನು ಪತ್ತೆಹಚ್ಚಲಾಗಿಲ್ಲ. ಬಹುಶಃ ನಾನು ಕೆಟ್ಟದಾಗಿ ಆಡಿರಬೇಕು…’ ಎಂದು ಹಾಲೆಪ್‌ ನಿರಾಸೆಯಿಂದ ಪ್ರತಿಕ್ರಿಯಿಸಿದ್ದಾರೆ. ಈ ಆಘಾತಾಕರಿ ಸೋಲಿಗಾಗಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

Advertisement

ಪ್ಲಿಸ್ಕೋವಾ ನಂ. ವನ್‌
ಈ ಫ‌ಲಿತಾಂಶದಿಂದಾಗಿ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಅವರೇ ವಿಶ್ವದ ನಂಬರ್‌ ವನ್‌ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಆದರೆ ಪ್ಲಿಸ್ಕೋವಾ ಮತ್ತು ಹಾಲೆಪ್‌ ನಡುವೆ ಇರುವುದು ಕೇವಲ 5 ಅಂಕಗಳ ಅಂತರ ಮಾತ್ರ! ಸಿನ್ಸಿನಾಟಿ ಕೂಟದ ಸೆಮಿಫೈನಲ್‌ನಲ್ಲಿ ಪ್ಲಿಸ್ಕೋವಾ ಮುಗುರುಜಾಗೆ ಸೋತಿದ್ದರು. ಸಿನ್ಸಿನಾಟಿ ಗೆಲುವಿ ನಿಂದ ಮುಗುರುಜಾ ವನಿತಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ನೆಗೆದಿದ್ದಾರೆ.

ಡಿಮಿಟ್ರೋವ್‌ಗೆ ದೊಡ್ಡ ಪ್ರಶಸ್ತಿ
ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಗ್ರಿಗರ್‌ ಡಿಮಿಟ್ರೋವ್‌ಗೆ ಇದು 7ನೇ ಹಾಗೂ ಬಾಳ್ವೆಯ ದೊಡ್ಡ ಪ್ರಶಸ್ತಿಯಾಗಿದೆ. ಅವರಿಗೆ ಲಭಿಸಿದ ಬಹುಮಾನದ ಮೊತ್ತ 954,225 ಡಾಲರ್‌. ಪ್ರಶಸ್ತಿಯ ಹಾದಿ ಯಲ್ಲಿ ಡಿಮಿಟ್ರೋವ್‌ ಒಂದೂ ಸೆಟ್‌ ಕಳೆದುಕೊಳ್ಳಲಿಲ್ಲ.

“ನನ್ನ ಪಾಲಿಗೆ ಇದೊಂದು ದೊಡ್ಡ ಸಾಧನೆ. ಯುಎಸ್‌ ಓಪನ್‌ಗೆ ಇದರಿಂದ ಸ್ಫೂರ್ತಿ ಲಭಿಸಲಿದೆ’ ಎಂದು 2017ರ ಸಾಲಿನ 3ನೇ ಪ್ರಶಸ್ತಿ ಗೆದ್ದ 26ರ ಹರೆಯದ ಡಿಮಿಟ್ರೋವ್‌ ಹೇಳಿದರು. ಈ ವರ್ಷ ಅವರು ಬ್ರಿಸ್ಬೇನ್‌ ಹಾಗೂ ಸೋಫಿಯಾ ಟೆನಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿದ್ದರು. 

ನಿಕ್‌ ಕಿರ್ಗಿಯೋಸ್‌ ಪಾಲಿಗೆ ಇದೊಂದು ಆಘಾತಕಾರಿ ಸೋಲು. ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ನೂತನ ನಂ.1 ಟೆನಿಸಿಗ ರಫೆಲ್‌ ನಡಾಲ್‌ ಅವರನ್ನು ಸೋಲಿಸಿ ಸುದ್ದಿಯಾಗಿದ್ದರು. ಆದರೆ ಡಿಮಿಟ್ರೋವ್‌ ಸವಾಲನ್ನು ಮೆಟ್ಟಿ ನಿಲ್ಲಲು ಕಾಂಗರೂ ಟೆನಿಸಿಗನಿಗೆ ಸಾಧ್ಯವಾಗಲಿಲ್ಲ.

“ಇದು ಈವರೆಗೆ ನಾನು ಕಂಡ ಬಿಗ್‌ ಫೈನಲ್‌. ಇಂದು ಸೋತಿರಬಹುದು, ಆದರೆ ಇಲ್ಲಿನ ಪ್ರಶಸ್ತಿ ಸುತ್ತಿನಲ್ಲಿ ಸೆಣಸಿದ್ದೇ ರೋಮಾಂಚಕಾರಿ ಅನುಭವ. ಮುಂದಿನ ಯುಎಸ್‌ ಓಪನ್‌ ಟೂರ್ನಿಯಲ್ಲೂ ಮತ್ತೆ ಕೆಲವು ಪಂದ್ಯಗಳನ್ನು ಗೆಲ್ಲಬೇಕಿದೆ’ ಎಂದು 23ರ ಹರೆಯದ ಕಿರ್ಗಿಯೋಸ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next