ವಿಟ್ಲ: ತೆಂಕುತಿಟ್ಟು ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರಾಗಿ ಗುರುತಿಸಿಕೊಂಡಿರುವ ಬಹುತೇಕ ಹಿಮ್ಮೇಳ ಕಲಾವಿದರ ಗುರುಗಳಾಗಿರುವ ಹಿರಿಯ ಯಕ್ಷಗಾನ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಈ ಬಾರಿ ಕರ್ನಾಟಕ ಯಕ್ಷಗಾನ ಅಕಾಡಮಿ ಕೊಡಮಾಡುವ ಸರ್ವೋಚ್ಛ ಪ್ರಶಸ್ತಿಯಾದ ಪಾರ್ತಿಸುಬ್ಬ ಪ್ರಶಸ್ತಿಯನ್ನು ಜ.10ರ ಶುಕ್ರವಾರ ಘೋಷಣೆ ಮಾಡಿದೆ.
ಬಂಟ್ವಾಳ ತಾಲೂಕಿನ ಕರೋಪಾಡಿಯ ಮಾಂಬಾಡಿಯವರಾದ ಸುಬ್ರಹ್ಮಣ್ಯ ಭಟ್ಟರು ಪ್ರಸ್ತುತ ಇಡ್ಕಿದು ಗ್ರಾಮದ ಉರಿಮಜಲು ಸಮೀಪ ಪ್ರಶಾಂತಿ ಲೇಔಟ್ ನಲ್ಲಿ ವಾಸಿಸುತ್ತಿದ್ದಾರೆ.
1949 ಮಾರ್ಚ್ 27ರಂದು ಮಾಂಬಾಡಿ ನಾರಾಯಣ ಭಾಗವತ – ಲಕ್ಷ್ಮೀ ಅಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲೊಬ್ಬರಾಗಿ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಮಾಂಬಾಡಿಯಲ್ಲಿ ಜನಿಸಿದರು.
ಪತ್ನಿ ಲಕ್ಷ್ಮೀ, ಮಕ್ಕಳಾದ ವೇಣುಗೋಪಾಲ್ ಮಾಂಬಾಡಿ ಮತ್ತು ನಾರಾಯಣ ಪ್ರಸನ್ನ ಮಾಂಬಾಡಿ – ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರರು. ವೇಣುಗೋಪಾಲ್ ಅವರು ಉತ್ತಮ ಹಿಮ್ಮೇಳವಾದಕರಾಗಿ ಹೆಸರು ಗಳಿಸಿದ್ದಾರೆ.
ಗುರುಪರಂಪರೆ ಮುನ್ನಡೆಸಿದವರು
ಯಕ್ಷಗಾನ ಹಿಮ್ಮೇಳ ಗುರುಪರಂಪರೆಯ ಪದ್ಯಾಣ ಮನೆತನದ ಮಾಂಬಾಡಿ ಮನೆಯವರಾದ ಸುಬ್ರಹ್ಮಣ್ಯ ಭಟ್ಟರ ತಂದೆ ದಿ.ಮಾಂಬಾಡಿ ನಾರಾಯಣ ಭಾಗವತರು ಸ್ವಾತಂತ್ರ್ಯಪೂರ್ವದಲ್ಲೇ ತೆಂಕುತಿಟ್ಟಿನ ಹಿಮ್ಮೇಳ ಪ್ರಸಿದ್ಧ ಭಾಗವತರಾಗಿ ದೇವಿಮಹಾತ್ಮೆ ಪ್ರಸಂಗವನ್ನು ಏಳು ಹಾಗೂ ಐದು ದಿನಗಳ ಕಾಲ ಸ್ವಂತ ಪದ್ಯರಚನೆಯಲ್ಲೇ ಹಾಡಿ, ದಾಖಲೆ ಮಾಡಿದ್ದಲ್ಲದೆ ಯಕ್ಷಗಾನ ಗುರುಗಳಾಗಿ ಹೆಸರು ಗಳಿಸಿದವರು. ಅವರ ನಾಲ್ವರು ಪುತ್ರರಲ್ಲಿ (ಇಬ್ಬರು ಪುತ್ರಿಯರು) ದ್ವಿತೀಯ ಪುತ್ರರಾಗಿ ಜನಿಸಿದ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನ ಪರಂಪರೆಯನ್ನು ಮುನ್ನಡೆಸಿದ್ದು ಸುಮಾರು 15000ದಷ್ಟು ಮಂದಿಗೆ ಅವರು ಹಿಮ್ಮೇಳ ಪಾಠ ಮಾಡಿದ್ದಾರೆ.
ಬಾಲ್ಯದಲ್ಲೇ ಮೇಳ ಸೇರಿದವರು
75ರ ಹರೆಯದ ಮಾಂಬಾಡಿ ಸುಬ್ರಹ್ಮಣ್ಯ ಭಟ್. ತಂದೆ ದಿ. ಮಾಂಬಾಡಿ ನಾರಾಯಣ ಭಾಗವತರಿಂದಲೇ ಯಕ್ಷಗಾನದ ಭಾಗವತಿಕೆ, ಚೆಂಡೆ, ಮದ್ದಳೆ ವಾದನವನ್ನು ಕರಗತ ಮಾಡಿಕೊಂಡವರು. ಬಳಿಕ ಬಾಲ್ಯದಲ್ಲೇ ಮೇಳ ಸೇರಿ ಅನುಭವ ಗಳಿಸಿದವರು. ಚಿಪ್ಪಾರು ಕೃಷ್ಣಯ್ಯ ಬಲ್ಲಾಳದಿಂದ ಚೆಂಡೆಯ ಪಟ್ಟುಗಳನ್ನು ಕರಗತ ಮಾಡಿಕೊಂಡ ಅವರು, ಕಟೀಲು, ಕದ್ರಿ, ಧರ್ಮಸ್ಥಳ ಮೇಳಗಳಲ್ಲಿ ಸುಮಾರು ಇಪ್ಪತ್ತು ವರ್ಷಗಳ ಯಕ್ಷಗಾನ ತಿರುಗಾಟ ಮಾಡಿ, ತಮಗೆ ಒಲಿದ ಕಲೆಯನ್ನು ಧಾರೆಯೆರುವ ಕಾಯಕಕ್ಕೆ ಮುಂದಾದವರು.
1962 ರಿಂದ ಮೊದಲ್ಗೊಂಡು-ಧರ್ಮಸ್ಥಳ, ಕಟೀಲು, ಮುಲ್ಕಿ, ಕೂಡ್ಲು, ಕದ್ರಿ ಮುಂತಾದ ವೃತ್ತಿಪರ ಮೇಳಗಳಲ್ಲಿ ಸುಮಾರು 20 ವರ್ಷಗಳ ಕಾಲ ಮದ್ದಳೆ, ಚೆಂಡೆವಾದಕರಾಗಿ ಕಲಾ ಸೇವೆ ನಡೆಸಿದ್ದು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಪ್ರಿಯ ಶಿಷ್ಯನಾಗಿ, ಮಹಾನ್ ಗುರುಗಳಾದ ನೆಡ್ಲೆ ನರಸಿಂಹ ಭಟ್, ಕುದ್ರೆಕೋಡ್ಲು ರಾಮ ಭಟ್ ಸಾಹಚರ್ಯದಿಂದ ಕಲಾಪ್ರತಿಭೆಯನ್ನು ಪುಟಗೊಳಿಸಿಕೊಂಡರು.
ಯಕ್ಷಗಾನ ಹಿಮ್ಮೇಳ ತರಬೇತಿ
1968ನೇ ಇಸವಿಯಲ್ಲಿ ಕಾಸರಗೋಡು ತಾಲೂಕು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯಲ್ಲಿ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಆಹ್ವಾನದ ಮೇರೆಗೆ ಹಿಮ್ಮೇಳ ಶಿಕ್ಷಣಕ್ಕೆ ಮುಂದಾದರು. ನಂತರ, ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ವಿವಿಧೆಡೆ ನೂರಕ್ಕೂ ಮಿಕ್ಕಿ ತರಗತಿ ನಡೆಸಿ ಹಲವಾರು ಶಿಷ್ಯರಿಗೆ ತೆಂಕುತಿಟ್ಟು ಹಿಮ್ಮೇಳ ತರಬೇತಿ ನೀಡಿದರು.
ಅನುಭವಿ ಶಿಷ್ಯ ಪರಂಪರೆ
ಶಿಕ್ಷಕರಾಗಿ ಪರಂಪರೆಯನ್ನು ಮುನ್ನಡೆಸುತ್ತಿರುವ ವಿಶ್ವವಿನೋದ ಬನಾರಿ, ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ, ವೃತ್ತಿ ಮೇಳಗಳಲ್ಲಿ ಸಕ್ರಿಯರಾಗಿರುವ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಅಂಡಾಲ ದೇವಿಪ್ರಸಾದ ಶೆಟ್ಟಿ, ಪಟ್ಲ ಸತೀಶ ಶೆಟ್ಟಿ, ಬೋಂದೆಲ್ ಸತೀಶ್ ಶೆಟ್ಟಿ, ಪ್ರಶಾಂತ ವಗೆನಾಡು, ಪೊಳಲಿ ದಿವಾಕರ ಆಚಾರ್ಯ, ಪದ್ಯಾಣ ಗೋವಿಂದ ಭಟ್, ಪೆಲತ್ತಡ್ಕ ಗೋಪಾಲಕೃಷ್ಣ ಮಯ್ಯ, ನೆಕ್ಕರೆಮೂಲೆ ಗಣೇಶ ಭಟ್, ಯೋಗೀಶ ಆಚಾರ್ಯ ಉಳೆಪ್ಪಾಡಿ, ಹೊಸಮೂಲೆ ಗಣೇಶ ಭಟ್, ಪ್ರಫುಲ್ಲಚಂದ್ರ ನೆಲ್ಯಾಡಿ, ದೇವಿಪ್ರಸಾದ್ ಆಳ್ವ, ಪೂರ್ಣೇಶ ಅಚಾರ್ಯ, ಸುಬ್ರಾಯ ಹೊಳ್ಳ ಕಾಸರಗೋಡು, ಲವಕುಮಾರ ಐಲ ಮುಂತಾದವರು ಇವರ ಶಿಷ್ಯರು.
ಹವ್ಯಾಸಿ ರಂಗದ ಯಕ್ಷಗಾನ ಪ್ರತಿಭೆಗಳಾದ ಜಿ.ಕೆ.ನಾವಡ ಬಾಯಾರು, ನಿಡುವಜೆ ಪುರುಷೋತ್ತಮ ಭಟ್, ನಿಡುವಜೆ ಶಂಕರ ಭಟ್, ಕೋಳ್ಯೂರು ಭಾಸ್ಕರ, ಸುಬ್ರಾಯ ಸಂಪಾಜೆ, ಕೃಷ್ಣರಾಜ ನಂದಳಿಕೆ, ವೇಣುಗೋಪಾಲ ಮಾಂಬಾಡಿ, ಅರ್ಜುನ ಕೊರ್ಡೇಲ್, ಕಾರ್ತಿಕ್ ಕೊರ್ಡೇಲ್, ಪ್ರಶಾಂತ ಶೆಟ್ಟಿ, ರಾಮಪ್ರಸಾದ್ ವಧ್ವ ಕೂಡ ಮಾಂಬಾಡಿಯವರಲ್ಲೇ ಶಿಷ್ಯತ್ವ ಪಡೆದವರು.
ಸಂದ ಪ್ರಶಸ್ತಿಗಳು
ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ದೆಹಲಿ ಕನ್ನಡ ಸಂಘ ಪ್ರಶಸ್ತಿ, ಕೀಲಾರು ಪ್ರತಿಷ್ಠಾನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ನೆಡ್ಲೆ ಪ್ರತಿಷ್ಠಾನ ಪ್ರಶಸ್ತಿ, ರಸಿಕ ರತ್ನ ಗೋಪಾಲಕೃಷ್ಣ ಜೋಶಿ ಪ್ರತಿಷ್ಠಾನ ಪ್ರಶಸ್ತಿ, ಶ್ರೀಹರಿಲೀಲಾ ಪ್ರಶಸ್ತಿ ಹವ್ಯಾಸಿ ಬಳಗ ಕದ್ರಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಯಕ್ಷಗಾನ ಕೇಂದ್ರ , ಉಡುಪಿ, ಕೋಡಪದವು ವೀರಾಂಜನೇಯ ಪ್ರತಿಷ್ಠಾನ, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ಮಾಂಬಾಡಿ ಶಿಷ್ಯ ವೃಂದ ಮಂಗಳೂರು, ಮಾಂಬಾಡಿ ಶಿಷ್ಯ ಸಮಾವೇಶದ ಗುರುವಂದನೆ, ಕೋಳ್ಯೂರು ದೇವಸ್ಥಾನ, ಚಿಗುರುಪಾದೆ ಮುಂತಾದೆಡೆಗಳಲ್ಲಿ ಅವರಿಗೆ ಪುರಸ್ಕಾರಗಳು ಸಂದಿವೆ.