Advertisement

ಮಮತಾ ಮೇಲೆ ಮಮತೆ ಬೀರಿದ ಸ್ನೇಹಾಲಯ

11:23 PM Jan 23, 2020 | Team Udayavani |

ಮಂಜೇಶ್ವರ: ಆಕೆ ಎಲ್ಲಿಂದ ಬಂದಳು, ಹೇಗೆ ಬಂದಳು, ಇಲ್ಲಿಗೆ ತಲುಪಿದ್ದಾ ದರೂ ಎಂತು, ಯಾರಾಕೆ….. ಅದೆಲ್ಲ ಇನ್ನೂ ಬಿಡಿಸಲಾರದ ಗಂಟು… ಆದರೆ, ನಡೆ ನುಡಿ ಯಲ್ಲಿ ಉತ್ತರ ಭಾರತದವಳಿರಬಹುದೆಂಬ ನಂಬಿಕೆ. ಹಿಂದಿಯಲ್ಲಿ ಒಂದಕ್ಕೊಂದು ತಾಳೆಯಾಗದ, ಅರ್ಥವಿಲ್ಲದ ಮಾತು…. ಆದರೆ, ತನ್ನ ಹೆಸರು ಮಮತಾ ಎಂದು ಮಾತ್ರ ಆಗಾಗ್ಗೆ ಖಾತ್ರಿಪಡಿಸುತ್ತಾಳೆ.

Advertisement

ಜ. 6ರಂದು ಸಂಜೆ ಮಂಜೇಶ್ವರ ರೈಲು ನಿಲ್ದಾಣ ಸಮೀಪ ರೈಲು ಹಳಿಯಲ್ಲೇ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ನಡೆಯುತ್ತಿದ್ದ ಸುಮಾರು 40ರ ಹರೆಯದ ಮಾನಸಿಕ ರೋಗಿ ಮಹಿಳೆಯನ್ನು ಕಂಡ ನಾಗರಿಕರು ಮಂಜೇಶ್ವರ ಸ್ನೇಹಾಲಯಕ್ಕೆ ಫೋನಾಯಿಸಿದರು. ಮಾಹಿತಿ ತಿಳಿದಾಕ್ಷಣವೇ ಜೋಸೆಫ್‌ ಕ್ರಾಸ್ತಾ ನೇತೃತ್ವದಲ್ಲಿ ಅಲ್ಲಿನ ಕಾರ್ಯ ಕರ್ತರು ತಲುಪಿ ಆಕೆಯನ್ನು ತಮ್ಮ ವಾಹನ ದಲ್ಲಿ ಕರೆತಂದು ಪ್ರಾಥಮಿಕ ಆರೈಕೆಯಿತ್ತು ವಿಶ್ರಾಂತಿಗೆ ಬಿಟ್ಟ ಬಳಿಕ ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗಕ್ಕೆ ದಾಖಲಿಸಲಾಗಿದೆ.

ಸದ್ಯ ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿಧಾನವಾಗಿ ಮಾನಸಿಕ ಚೇತರಿಕೆ ಕಾಣುತ್ತಿದ್ದಾಳೆ. ಆದರೆ, ತನ್ನ ಮನೆ, ಮಠವನ್ನು ಸ್ಮರಿಸಲು ಇನ್ನೂ ಶಕ್ಯಳಾಗಿಲ್ಲ. ಒಂದೆರಡು ವಾರಗಳ ದಾಖಲು ಚಿಕಿತ್ಸೆ ಬಳಿಕ ಮಮತಾರನ್ನು ಸ್ನೇಹಾಲಯಕ್ಕೆ ಮರಳಿಸಿ ಅವರಿಗೆ ಆತ್ಮೀಯ ಆರೈಕೆ ನೀಡಲಾಗುವುದು.

ಇಲ್ಲಿನ ಆಪ್ತ ಸಮಾಲೋಚನೆ, ಕೂಡಿ ಬಾಳುವಿಕೆ, ಎಲ್ಲಕ್ಕಿಂತ ಮಿಗಿಲಾಗಿ ಸ್ನೇಹಮಯಿ ಪರಿಸರದಲ್ಲಿ ಆಕೆಯು ಶೀಘ್ರದಲ್ಲೇ ಸಹಜತೆಗೆ ಬಂದು ತನ್ನವರನ್ನು, ಮನೆ ವಿಳಾಸವನ್ನು ಗುರುತಿಸುವ ನಂಬಿಕೆಯಿರುವುದಾಗಿ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್‌ ಕ್ರಾಸ್ತಾ ಭರವಸೆ ಹಂಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next