ಕೋಲ್ಕತಾ: ರಾಮನವಮಿ ರ‍್ಯಾಲಿಗಳ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆದ ಘರ್ಷಣೆಗಳ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ”ಕೇಸರಿ ಪಕ್ಷವು ಉದ್ದೇಶಪೂರ್ವಕವಾಗಿ ಅನುಮತಿಯಿಲ್ಲದೆ ಮೆರವಣಿಗೆಗಳೊಂದಿಗೆ ಅಲ್ಪಸಂಖ್ಯಾತರ ಪ್ರದೇಶಗಳನ್ನು ಪ್ರವೇಶಿಸಿತ್ತು” ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ನಾನು ಜನರಿಗಾಗಿ ಎಲ್ಲವನ್ನೂ ಮಾಡುತ್ತೇನೆ, ಆದರೆ ಮುಂಬರುವ ಪಂಚಾಯತ್ ಚುನಾವಣೆಗಳು ಮತ್ತು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಗಲಭೆಗಳನ್ನು ಸೃಷ್ಟಿಸುವ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸದಂತೆ ವಿನಂತಿಸುತ್ತೇನೆ” ಎಂದರು.
“ಕೇಂದ್ರೀಯ ಪಡೆಗಳು ಇಲ್ಲಿಗೆ ಬಂದವು, ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿವೆ, ಗಲಭೆ ಎಬ್ಬಿಸಿದವು, ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿ ನಂತರ ಹಿಂತಿರುಗಿದವು” ಎಂದು ಬ್ಯಾನರ್ಜಿ ಕಿಡಿ ಕಾರಿದರು.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಶ್ರಾದಲ್ಲಿ ಮಸೀದಿಯ ಹೊರಗೆ ರಾಮನವಮಿ ರ‍್ಯಾಲಿಯ ಮೇಲೆ ದಾಳಿ ನಡೆಸಲಾಯಿತು. ಸ್ಥಳೀಯ ಶಾಸಕ ಗಾಯಗೊಂಡಿದ್ದಾರೆ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ. ರ‍್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರ ಪ್ರಕಾರ ರ‍್ಯಾಲಿಯ ಮೇಲೆ ಕಲ್ಲು ತೂರಾಟ ನಡೆದಿದೆ.
ಶುಕ್ರವಾರ, ಪಶ್ಚಿಮ ಬಂಗಾಳದ ಹೌರಾ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಗಿತ್ತು, ನಂತರ ರಾಮನವಮಿ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ವರದಿಗಳ ಪ್ರಕಾರ, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಅಂಗಡಿಗಳು ಮತ್ತು ಆಟೋ ರಿಕ್ಷಾಗಳನ್ನು ಧ್ವಂಸಗೊಳಿಸಲಾಗಿದೆ. ಇದರ ನಂತರ, ಸಿಐಡಿ ಹಿಂಸಾಚಾರದ ಘಟನೆಗಳ ತನಿಖೆಯನ್ನು ಪ್ರಾರಂಭಿಸಿದೆ.
ಘರ್ಷಣೆಗಳಿಗೆ ಟಿಎಂಸಿ ಕಾರಣ
ಏತನ್ಮಧ್ಯೆ, ಮತ್ತೊಂದೆಡೆ, ರಾಜ್ಯದಲ್ಲಿ ಇತ್ತೀಚಿನ ಘರ್ಷಣೆಗಳಿಗೆ ಟಿಎಂಸಿ ಕಾರಣ ಎಂದು ಬಿಜೆಪಿ ಆರೋಪಿಸಿದೆ ಮತ್ತು ಸಿಎಂ ಬ್ಯಾನರ್ಜಿ ರಾಜೀನಾಮೆಗೆ ಒತ್ತಾಯಿಸಿದೆ. ಬಿಜೆಪಿಯ ಹೂಗ್ಲಿ ಸಂಸದೆ ಲಾಕೆಟ್ ಚಟರ್ಜಿ ಅವರು ಸೋಮವಾರ ಕೇಂದ್ರದ ಮಧ್ಯಸ್ಥಿಕೆಗೆ ಕರೆ ನೀಡಿದರು ಮತ್ತು ಹಿಂಸಾಚಾರದ ಬಗ್ಗೆ ಎನ್‌ಐಎ ತನಿಖೆಗೆ ಒತ್ತಾಯಿಸಿದ್ದಾರೆ.
“ಇದು ಮುಸ್ಲಿಂ ಮತಗಳನ್ನು ಕ್ರೋಢೀಕರಿಸಲು ಮತ್ತು ಮುಸ್ಲಿಮರನ್ನು ಸಂತೋಷಪಡಿಸಲು ಮಮತಾ ಬ್ಯಾನರ್ಜಿಯವರ ಪೂರ್ವ ಯೋಜಿತ ಪಿತೂರಿಯ ಫಲಿತಾಂಶವಾಗಿದೆ. ಮಮತಾ ಬ್ಯಾನರ್ಜಿ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಸರಿಯಾಗಿ ನೋಡಬೇಕೆಂದು ನಾವು ಬಯಸುತ್ತೇವೆ. ನಾವು ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿದ್ದೇವೆ ಎಂದು ಲಾಕೆಟ್ ಚಟರ್ಜಿ ಹೇಳಿದ್ದಾರೆ.