Advertisement

ದೀದಿ ಹೇಳಿಕೆಗೆ ವ್ಯಾಪಕ ಆಕ್ರೋಶ; ಮಮತಾ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ

06:55 PM Apr 12, 2022 | Team Udayavani |

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾದಿಯಾದಲ್ಲಿ 14 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಟಿಎಂಸಿ ನಾಯಕನ ಮಗನೇ ಪ್ರಮುಖ ಆರೋಪಿ ಎಂಬ ದೂರು ಕೇಳಿಬಂದ ಬೆನ್ನಲ್ಲೇ, ಪ್ರಕರಣದ ಬಗ್ಗೆ ವ್ಯಂಗ್ಯವಾಡಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

ಅತ್ಯಾಚಾರ ಪ್ರಕರಣಕ್ಕೆ ಪ್ರೇಮದ ದೃಷ್ಟಿಕೋನ ಕೊಟ್ಟ ದೀದಿ ವಿರುದ್ಧ ಕಲ್ಕತ್ತ ಹೈಕೋರ್ಟ್‌ನಲ್ಲಿ ದಾವೆಯನ್ನೂ ಹೂಡಲಾಗಿದೆ. ಗಂಭೀರ ಪ್ರಕರಣವೊಂದರ ಬಗ್ಗೆ ಅಸಂಬದ್ಧ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ವಿರುದ್ಧ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬಾಲಕಿ ಸಾವಿನ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ್ದ ದೀದಿ, “ಆಕೆ ಅತ್ಯಾಚಾರಕ್ಕೊಳಗಾದಳ್ಳೋ ಅಥವಾ ಮೊದಲೇ ಗರ್ಭಿಣಿಯಾಗಿದ್ದಳ್ಳೋ? ಅವಳಿಗೆ ಆ ಹುಡುಗನೊಂದಿಗೆ ಮೊದಲೇ ಪ್ರೇಮವಿದ್ದರೆ ನಾನೇನು ಮಾಡಲಿ’ ಎಂದು ಕೇಳಿದ್ದರು. ಇದೇ ವೇಳೆ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಈ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಎಲ್ಲೆಲ್ಲೂ ಖಂಡನೆ:
ದೀದಿ ಹೇಳಿಕೆ ಬಗ್ಗೆ ನಿರ್ಭಯಾ ತಾಯಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, “ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಈ ರೀತಿ ಹೇಳುವವರು ಸಿಎಂ ಸ್ಥಾನದಲ್ಲಿರಲು ಅರ್ಹರಲ್ಲ’ ಎಂದಿದ್ದಾರೆ. ಬಿಜೆಪಿ ನಾಯಕ ಅಮಿತ್‌ ಮಾಳವೀಯ, “ಸಿಎಂ ಹೇಳಿಕೆ ಅಸಹ್ಯಕರ ಮಾತ್ರವಲ್ಲ ಅದು ಸಂತ್ರಸ್ತೆಯನ್ನು ತೆಗಳಿ ಆರೋಪಿಯನ್ನು ರಕ್ಷಿಸುತ್ತಿರುವಂತಿದೆ’ ಎಂದಿದ್ದಾರೆ.

ದಮಯಂತಿ ಸೇನ್‌ ತನಿಖೆ:
ಈ ಪ್ರಕರಣವೂ ಸೇರಿ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ನಾಲ್ಕು ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸಲು ಕಲ್ಕತ ಹೈಕೋರ್ಟ್‌ ಐಪಿಎಸ್‌ ಅಧಿಕಾರಿ ದಮಯಂತಿ ಸೇನ್‌ರನ್ನು ನೇಮಿಸಿದೆ. ಅವರು ಈ ಹಿಂದೆ 2012ರಲ್ಲಿ ಪಾರ್ಕ್‌ ಸ್ಟ್ರೀಟ್‌ ಪ್ರಕರಣದ ಮೂಲಕ ಹೆಸರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next