ಕೋಲ್ಕತಾ:ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಸತತವಾಗಿ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಮಮತಾ ಬ್ಯಾನರ್ಜಿ ಮೇ 5ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳದ ಸೇವಾ ಸಹಕಾರಿ ಬ್ಯಾಂಕಿನ ಸಿಇಒ ರವೀಂದ್ರನ್ ನೇಣಿಗೆ ಶರಣು
ಸೋಮವಾರ(ಮೇ 03) ನಡೆದ ಪಕ್ಷದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ. ಮೇ 6ರಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಟಿಎಂಸಿ ಪಕ್ಷ ಬಂಗಾಳದಲ್ಲಿ ಜಯಭೇರಿ ಗಳಿಸಿದ್ದರು ಕೂಡಾ, ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಪರಾಜಯಗೊಂಡಿದ್ದಾರೆ. ನಂದಿಗ್ರಾಮದ ಫಲಿತಾಂಶದ ಬಗ್ಗೆ ಆಕ್ರೋಶವ್ಯಕ್ತಪಡಿಸಿರುವ ಮಮತಾ ಮರು ಮತಎಣಿಕೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾರೆ.
ಸಂವಿಧಾನದ ಪ್ರಕಾರ ಮಮತಾ ಬ್ಯಾನರ್ಜಿ ಅವರು ಸೋತಿದ್ದರೂ ಕೂಡಾ, ಇನ್ನು ಆರು ತಿಂಗಳ ಒಳಗಾಗಿ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿ ಸಿಎಂ ಹುದ್ದೆಗೆ ಏರಬಹುದು. ಇಲ್ಲದಿದ್ದಲ್ಲಿ ಯಾವುದಾದರು ಖಾಲಿ ಇರುವ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಆರು ತಿಂಗಳೊಳಗೆ ಉಪಚುನಾವಣೆಯಲ್ಲಿ ಗೆದ್ದು
ಮುಖ್ಯಮಂತ್ರಿಯಾಗಬಹುದು.