Advertisement

ದೇಶಕ್ಕೆ ನಾಲ್ಕು ರಾಜಧಾನಿ : ಚರ್ಚೆ ಹುಟ್ಟುಹಾಕಿದ ಮಮತಾ ಹೇಳಿಕೆ

12:32 AM Jan 25, 2021 | Team Udayavani |

ಇಡೀ ಭಾರತಕ್ಕೆ ಕೇವಲ ಒಂದು ರಾಜಧಾನಿ ಏಕಿರಬೇಕು ಎಂಬ ಪ್ರಶ್ನೆ ಎತ್ತಿ ಚರ್ಚೆ ಹುಟ್ಟುಹಾಕಿದ್ದಾರೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಅಲ್ಲದೇ ದೇಶದ ನಾಲ್ಕು ಮೂಲೆಗಳಲ್ಲಿ  ನಾಲ್ಕು ರಾಜಧಾನಿಗಳು ಇರಬೇಕು, ರೊಟೇಟಿಂಗ್‌ ಪದ್ಧತಿಯಲ್ಲಿ ಅವುಗಳನ್ನು ಬಳಸಿಕೊಳ್ಳಬೇಕು ಎಂದಿದ್ದಾರವರು. ರಾಷ್ಟ್ರಕ್ಕೆ ಹಲವು ರಾಜಧಾನಿಗಳಿರಬೇಕು ಎಂಬ ವಾದ ಹೊಸದೇ ಆದರೂ ರಾಜ್ಯದ ವಿಚಾರದಲ್ಲಿ ಈ ಪರಿಕಲ್ಪನೆ ಹೊಸದೇನೂ ಅಲ್ಲ.

Advertisement

ಆಂಧ್ರಪ್ರದೇಶ :

ಆಂಧ್ರದಲ್ಲಿ 2020ರಿಂದ ವಿಶಾಖಪಟ್ಟಣಂ, ಅಮರಾವತಿ ಮತ್ತು ಕರ್ನೂಲು ಕ್ರಮವಾಗಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ರಾಜಧಾನಿಗಳಾಗಿವೆ. ಕರ್ನೂಲು ಮತ್ತು ವಿಶಾಖಪಟ್ಟಣಂ ನಡುವೆ 700 ಕಿ.ಮಿ. ಅಂತರವಿದ್ದು, ಮಧ್ಯದಲ್ಲಿ ಅಮರಾವತಿ ಬರುತ್ತದೆ. ವಿವಿಧ ರಾಜಧಾನಿಗಳಿದ್ದಾಗ ಅವುಗಳ ಸುತ್ತಲಿನ ಪ್ರದೇಶಗಳು ಅಭಿವೃದ್ಧಿ ಕಾಣುತ್ತವೆ ಎನ್ನುವುದು ಸ್ಥಾಪನೆಯ ಉದ್ದೇಶ.

ಮಹಾರಾಷ್ಟ್ರ :

ಮಹಾರಾಷ್ಟ್ರದಲ್ಲಿ 2 ರಾಜಧಾನಿಗಳಿವೆ. ಮುಂಬೈ ಮತ್ತು ನಾಗಪುರ. ಮುಂಬಯಿ ಬೇಸಗೆಯ  ರಾಜಧಾನಿಯಾದರೆ, ನಾಗಪುರ ಚಳಿಗಾಲದ ರಾಜಧಾನಿ. ಹಿಂದುಳಿದ ವಿದರ್ಭಾ ಪ್ರದೇಶವು ಮುಂಬಯಿಂದ ಸುಮಾರು 1000 ಕಿ.ಮೀ. ದೂರದಲ್ಲಿರುವುದರಿಂದ ಅಭಿವೃದ್ಧಿ ವಂಚಿತವಾಗಿದೆ. ಹೀಗಾಗಿ ವಿದರ್ಭಾ ಜನರ ಬೇಡಿಕೆಗಳಿಗೆ ಕಿವಿಯಾಗಲು, ನಾಗಪುರವನ್ನು ಎರಡನೇ ರಾಜಧಾನಿಯಾಗಿಸಲಾಯಿತು.

Advertisement

ಜಮ್ಮು-ಕಾಶ್ಮೀರ :

ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರಕ್ಕೆ ಅಧಿಕೃತವಾಗಿ 2 ರಾಜಧಾನಿಗಳಿವೆ. ಬೇಸಗೆಯಲ್ಲಿ ಶ್ರೀನಗರ, ಚಳಿಗಾಲದಲ್ಲಿ ಜಮ್ಮು. 19ನೇ ಶತಮಾನದಲ್ಲಿ ಜಮ್ಮು-ಕಾಶ್ಮೀರದ ಮಹಾರಾಜ ರಣಬೀರ್‌ ಸಿಂಗ್‌, ವ್ಯೂಹಾತ್ಮಕ ದೃಷ್ಟಿಯಿಂದ ಹಾಗೂ ಹವಾಮಾನವನ್ನು ಪರಿಗಣಿಸಿ ಇವೆರಡೂ ನಗರಗಳನ್ನು ರಾಜಧಾನಿಯಾಗಿಸಿದರು. ಅಂದಿನಿಂದಲೂ ಈ ಪರಿಪಾಠ ಮುಂದುವರಿದಿದೆ.

ಹಿಮಾಚಲ ಪ್ರದೇಶ :

ಹಿ. ಪ್ರದೇಶದಲ್ಲೂ 2 ರಾಜಧಾನಿಗಳಿವೆ. ಧರ್ಮಶಾಲಾ ಮತ್ತು ಶಿಮ್ಲಾ. ಶಿಮ್ಲಾದಲ್ಲಿ ಚಳಿಗಾಲದ ಸಮಯದಲ್ಲಿ ವಿಪರೀತ ಹಿಮಪಾತ ಸಂಭವಿಸುವುದರಿಂದ ಅದನ್ನು ಬೇಸಗೆ ರಾಜಧಾನಿಯಾಗಿಸಲಾಗಿದೆ. 2017ರಲ್ಲಿ ಸರಕಾರ, ಧರ್ಮಶಾಲಾ ನಗರವನ್ನು 2ನೇ ರಾಜಧಾನಿಯಾಗಿ ಘೋಷಿಸಿದರು.

ಕರ್ನಾಟಕ :

ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಿಸಲಾಗಿಲ್ಲ. ಆದರೂ ಅದನ್ನು ಹಾಗೆಯೇ ಪರಿಗಣಿಸಲಾಗುತ್ತಿದೆ. 2012ರಲ್ಲಿ ರಾಜ್ಯ ಸರಕಾರ ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧ ಸ್ಥಾಪಿಸಿ, ಚಳಿಗಾಲದ ಅಧಿವೇಶನವನ್ನು ನಡೆಸುತ್ತಾ ಬರುತ್ತಿದೆ. ಉತ್ತರ ಕರ್ನಾಟಕ ಭಾಗದ ಬೇಡಿಕೆಗಳಿಗೆ ಕಿವಿಯಾಗುವುದೂ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಕ್ಕೆ ಕಾರಣ.

ತಮಿಳುನಾಡು :

ತಮಿಳುನಾಡು 2ನೇ ರಾಜಧಾನಿಯ ಕುರಿತು ಯೋಚಿಸುತ್ತಿದೆ. ಮಧುರೈ ಅನ್ನು 2ನೇ ರಾಜಧಾನಿಯಾಗಿಸಬೇಕೆಂಬ ಬೇಡಿಕೆಯಿದೆ. ಇದರಿಂದಾಗಿ ಚೆನ್ನೈಮೇಲಿನ ಒತ್ತಡ ತಗ್ಗಿ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಕೈಗಾರಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬುದು ಅಧಿಕಾರ ವರ್ಗದ ಯೋಚನೆ.

Advertisement

Udayavani is now on Telegram. Click here to join our channel and stay updated with the latest news.

Next