ಕೋಲ್ಕತಾ: ದೇಶದಲ್ಲಿನ ಪ್ರಸ್ತುತ ಸನ್ನಿವೇಶ ಉತ್ತಮವಾಗಿಲ್ಲ ಎಂದು ಹೇಳಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಪ್ರತ್ಯೇಕತೆಯ ರಾಜಕೀಯ ಬೆಳವಣಿಗೆ ಸ್ವಾಗತಾರ್ಹವಲ್ಲ ಎಂದು ಈದ್ ಉಲ್ ಫಿತರ್ ಕಾರ್ಯಕ್ರಮದಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಜ್ಞಾನಾಧಾರಿತ ‘ಸೂಪರ್ ಪವರ್’ ಭಾರತದ ಸಂಕಲ್ಪ: ಅಮಿತ್ ಶಾ
ಕೋಲ್ಕತಾದಲ್ಲಿ ಈದ್ ಉಲ್ ಫಿತರ್ ಪ್ರಾರ್ಥನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಮಮತಾ ಬ್ಯಾನರ್ಜಿ, ಜನರು ಒಟ್ಟಿಗೆ ಸೇರುವುದಕ್ಕಾಗಿ ಭಯಪಡಬೇಡಿ. ಆದರೆ ಉತ್ತಮ ಭವಿಷ್ಯಕ್ಕಾಗಿ ಒಗ್ಗಟ್ಟಿನಿಂದ ಇರಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ದೇಶದಲ್ಲಿನ ಪ್ರಸ್ತುತ ಒಡೆದಾಳುವ ನೀತಿಯಿಂದಾಗಿ ಯಾರು ಭಯಪಡುವ ಅಗತ್ಯವಿಲ್ಲ. ಸಾಮರಸ್ಯದ ಸಮಾಜಕ್ಕಾಗಿ ಹೋರಾಟ ಮುಂದುವರಿಸಬೇಕಾಗಿದೆ ಎಂದು ಬ್ಯಾನರ್ಜಿ ಈ ಸಂದರ್ಭದಲ್ಲಿ ಹೇಳಿದರು.
ಈದ್ ಉಲ್ ಫಿತರ್ ಪ್ರಾರ್ಥನೆಯಲ್ಲಿ ಸುಮಾರು 14 ಸಾವಿರ ಮಂದಿ ಸೇರಿದ್ದು, ನಾನಾಗಲಿ, ನನ್ನ ಪಕ್ಷ ಅಥವಾ ಸರ್ಕಾರವಾಗಲಿ ನಿಮಗೆ (ಮುಸ್ಲಿಮರು) ನೋವನ್ನುಂಟು ಮಾಡುವ ಕೆಲಸ ಮಾಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಈ ಸಂದರ್ಭದಲ್ಲಿ ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.
ಜಗತ್ತಿನಾದ್ಯಂತ ಒಂದು ತಿಂಗಳ ರಂಜಾನ್ ಉಪವಾಸ ವೃತವು ಕೊನೆಗೊಂಡಿದ್ದು, ಇಂದು ಎಲ್ಲೆಡೆ ಮುಸ್ಲಿಮರು ಈದ್ ಉಲ್ ಫಿತರ್ ಆಚರಿಸುತ್ತಿದ್ದಾರೆ.