ಕೋಲ್ಕತ್ತಾ: ಆಸಾನ್‌ಸೋಲ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ ಅಭಿಷೇಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪಶ್ಷಿಮ ಬಂಗಾಳದ ಮೊದಲ ನಾಲ್ಕು ಹಂತಗಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಒಡೆದುಹೋಗಿದೆ. ಕೊನೆಯ ಹಂತದ ಮತದಾನ ನಡೆಯುವ ಹೊತ್ತಿಗೆ ಮಮತಾ ಹಾಗೂ ಅವರ ಅಳಿಯ ಅಭಿಷೇಕ್‍ನನ್ನು ಸಂಪೂರ್ಣವಾಗಿ ಸೋಲಿಸಲಾಗುತ್ತದೆ ಎಂದು ಮೋದಿ ಹೇಳಿದರು.
ಏಪ್ರಿಲ್ 10 ರಂದು ಸಿತಲಾಕುಚಿ ವಿಧಾನ ಸಭಾ ಕ್ಷೇತ್ರದ ಕೋಚ್ ಬೆಹಾರ್ ನಲ್ಲಿ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಮೋದಿ, ಈ ಮೊದಲಿಂದಲೂ ಟಿಎಂಸಿ ನಾಯಕರು ಸತ್ತ ಹೆಣಗಳನ್ನಿಟ್ಟುಕೊಂಡು ರಾಜಕೀಯ ಮಾಡುತ್ತ ಬಂದಿದ್ದಾರೆ. ಅದು ಈ ಬಾರಿಯೂ ಮುಂದುವರೆದಿದೆ ಎಂದು ಕುಟುಕಿದರು.
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣವನ್ನೂ ಉಲ್ಲೇಖಿಸಿದ ಪ್ರಧಾನಿ, ಮಮತಾ ಹಾಗೂ ಅಭಿಷೇಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಸಾನ್‌ಸೋಲ್‌ನಲ್ಲಿ ಏಳನೇ ಹಂತದಲ್ಲಿ, ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಪಕ್ಷವನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರುವ ಗುರಿಯೊಂದಿಗೆ ಮಮತಾ ಮತ್ತು ಅವರ ಸೋದರಳಿಯ ಅಭಿಷೇಕ್ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ತವಕಿಸುತ್ತಿರುವ ಬಿಜೆಪಿ ಸರಣಿ ರ್ಯಾಲಿಗಳನ್ನು ನಡೆಸುತ್ತಿದೆ. ಪ್ರತಿ ಚುನಾವಣಾ ಪ್ರಚಾರದಲ್ಲಿ ಟಿಎಂಸಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದೆ. ತಾವೇನು ಕಡಿಮೆ ಇಲ್ಲ ಎನ್ನುವಂತೆ ಮಮತಾ ಬ್ಯಾನರ್ಜಿ ಸಹ ಕಮಲದ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.