Advertisement

Bangladesh crisis: ಸಂತ್ರಸ್ತರು ನಮ್ಮ ಮನೆ ಬಾಗಿಲಿಗೆ ಬಂದರೆ ಆಶ್ರಯ ನೀಡುತ್ತೇವೆ: ಮಮತಾ

06:55 PM Jul 21, 2024 | Team Udayavani |

ಕೋಲ್ಕತಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ವೇಳೆಯಲ್ಲಿ ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರು “ನಮ್ಮ ಬಾಗಿಲು ತಟ್ಟಿದರೆ” ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ಅವರಿಗೆ ಆಶ್ರಯ ನೀಡಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಕೋಲ್ಕತಾದಲ್ಲಿ ಭಾರೀ ಮಳೆಯ ನಡುವೆ ತೃಣಮೂಲ ಕಾಂಗ್ರೆಸ್‌ನ ‘ಹುತಾತ್ಮರ ದಿನಾಚರಣೆ’ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ “ಬಾಂಗ್ಲಾದೇಶ ಬೇರೆ ದೇಶವಾಗಿರುವುದರಿಂದ ನಾನು ಬಾಂಗ್ಲಾದೇಶದ ಬಗ್ಗೆ ಏನನ್ನೂ ಮಾತನಾಡಲಾರೆ. ಭಾರತ ಸರ್ಕಾರ ಅದರ ಬಗ್ಗೆ ಮಾತನಾಡುತ್ತದೆ. ಆದರೆ ಅಸಹಾಯಕರು (Bangladesh) ಬಂಗಾಳದ ಬಾಗಿಲು ತಟ್ಟಿದರೆ, ನಾವು ಅವರಿಗೆ ಆಶ್ರಯ ನೀಡುತ್ತೇವೆ, ನೆರೆಹೊರೆಯವರು ನಿರಾಶ್ರಿತರನ್ನು ಗೌರವಿಸಿ ಎಂದು ವಿಶ್ವಸಂಸ್ಥೆಯ ನಿರ್ಣಯವಿದೆ” ಹೇಳಿದ್ದಾರೆ.

“ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಸಿಲುಕಿರುವ ಬಂಗಾಳ ನಿವಾಸಿಗಳಿಗೆ ನಾನು ಎಲ್ಲಾ ಸಹಕಾರವನ್ನು ಭರವಸೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ಬಾಂಗ್ಲಾದೇಶದಾದ್ಯಂತ ಕಟ್ಟುನಿಟ್ಟಾದ ಕರ್ಫ್ಯೂ ವಿಧಿಸಲಾಗಿದ್ದು, ಮಿಲಿಟರಿ ಸಿಬ್ಬಂದಿ ರಾಜಧಾನಿ ಢಾಕಾದ ಕೆಲವು ಭಾಗಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಸರ್ಕಾರಿ ಉದ್ಯೋಗಗಳ ಹಂಚಿಕೆಗೆ ಸಂಬಂಧಿಸಿದಂತೆ ರಾಷ್ಟ್ರದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನಿಯಂತ್ರಣಕ್ಕೆ ಸಿಗದೇ ಹೋಗಿದೆ. 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು,  ನೂರಾರು ಜನರು ಗಾಯಗೊಂಡಿದ್ದಾರೆ.

ಬಿಎಸ್ಎಫ್ ಹೈ ಅಲರ್ಟ್

Advertisement

ಬಾಂಗ್ಲಾದೇಶದಲ್ಲಿ ಅಶಾಂತಿಯಿಂದಾಗಿ ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಹೆಚ್ಚಿನ ಎಚ್ಚರಿಕೆಯನ್ನು BSF ಹೊಂದಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

“ಬಿಎಸ್‌ಎಫ್‌ಗೆ ಭದ್ರತೆಯ ಕಾಳಜಿಯಾಗಿದೆ, ನಾವು ಅಂತಾರರಾಷ್ಟ್ರೀಯ ಗಡಿಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದ್ದೇವೆ. ನಾವು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಗಮನಿಸುತ್ತಿದ್ದು ಗಡಿಯಾಚೆಗಿನ ಕ್ರಿಮಿನಲ್ ಗಳು ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಪಡೆಯದಂತೆ ಭದ್ರತೆಯನ್ನು ಹೆಚ್ಚಿಸಿದ್ದೇವೆ ಎಂದು ಬಿಎಸ್‌ಎಫ್ ತ್ರಿಪುರ ಫ್ರಾಂಟಿಯರ್ ಇನ್‌ಸ್ಪೆಕ್ಟರ್ ಜನರಲ್ ಪಟೇಲ್ ಪಿಯೂಷ್ ಪುರುಷೋತ್ತಮ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉನ್ನತ ಮಟ್ಟದ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ಯೋಧರು ಮತ್ತು ಎಲ್ಲಾ ಹಿರಿಯ ಕಮಾಂಡರ್‌ಗಳನ್ನು ಗಡಿಗೆ ಕಳುಹಿಸಲಾಗಿದೆ.ಬಿಎಸ್ಎಫ್ ನಮ್ಮ ದೇಶದ ಗಡಿಗಳನ್ನು ಸುರಕ್ಷಿತವಾಗಿರಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳುವುದು ಪ್ರಸ್ತುತ ಪ್ರಮುಖ ಕಾಳಜಿಗಳಲ್ಲಿ ಒಂದಾಗಿದೆ ಎಂದು ದಾಸ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next