ಕೋಲ್ಕತಾ: ಪಶ್ಚಿಮಬಂಗಾಳದ 4ನೇ ಹಂತದ ಮತದಾನದ ವೇಳೆ ಕೂಚ್ ಬೆಹರ್ ನಲ್ಲಿ ಕೇಂದ್ರದ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ(ಏ.10) ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಹಗಲಲ್ಲಿ ಹರಡಲ್ಲ, ರಾತ್ರಿ ಮಾತ್ರ ಹರಡುತ್ತೆ ಎಂದ ವಿಜ್ಞಾನಿಯ ಫೋಟೋ ಕೊಡಿ : ಡಿಕೆಶಿ
ಉತ್ತರ 24 ಪರಾಗಣಾಸ್ ನ ಬದುರಿಯಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಮತದಾನದ ವೇಳೆ ಕೇಂದ್ರದ ಪಡೆಯ ಗುಂಡಿನ ದಾಳಿಗೆ ನಾಲ್ವರು ಸಾವನ್ನಪ್ಪಿರುವ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದರು.
ಯಾವುದೇ ಕಾರಣಕ್ಕೂ ಜನರು ಉದ್ವಿಗ್ನಕ್ಕೆ ಒಳಗಾಗದೇ ಶಾಂತ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿರುವ ಮಮತಾ ಬ್ಯಾನರ್ಜಿ, ಮತಗಟ್ಟೆಯಲ್ಲಿ ಮತಚಲಾಯಿಸಲು ನಿಂತ ವ್ಯಕ್ತಿಗಳ ಮೇಲೆ ಕೇಂದ್ರ ಪಡೆ ಗುಂಡಿನ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಘಟನೆಯನ್ನು ಖಂಡಿಸಿ ಭಾನುವಾರ ರಾಜ್ಯಾದ್ಯಂತ 2ಗಂಟೆಯಿಂದ 4ಗಂಟೆವರೆಗೆ ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ತೃಣಮೂಲ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಮಮತಾ ಈ ಸಂದರ್ಭದಲ್ಲಿ ಹೇಳಿದರು. ಚುನಾವಣೆ ಸಂದರ್ಭದಲ್ಲಿ ಇಂತಹ ಕೃತ್ಯ ಎಸಗುವುದು ಕೇಂದ್ರ ಗೃಹ ಮಂತ್ರಿ ಶಾ ಅವರ ಪಿತೂರಿಯಾಗಿದೆ. ಜನರು ಶಾಂತಿಯುತವಾಗಿ ಮತ ಚಲಾಯಿಸುವ ಮೂಲಕ ಬಿಜೆಪಿಯನ್ನು ಸೋಲಿಸಿ ಮತದಾರರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.