ಮುಂಬಯಿ: ನಗರದ ಜಾತೀಯ ಸಂಘಟನೆಗಳಲ್ಲಿ ಒಂದಾಗಿರುವ ಮುಲುಂಡ್ ಬಂಟ್ಸ್‌ನ ಹದಿಮೂರನೇ ವಾರ್ಷಿಕೋತ್ಸವ ಸಂಭ್ರಮವು ಡಿ. 15 ರಂದು ಅಪರಾಹ್ನ 2.30 ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹುಂತ್ರಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ| ವಿಜಯ ಶೆಟ್ಟಿ, ಚಿತ್ರಕಲಾವಿದ ದೇವದಾಸ್ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು. ಅಲ್ಲದೆ ಸದಸ್ಯ ಬಾಂಧವರ ಪ್ರತಿಭಾವಂತ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ| ವಿಜಯ್ ಶೆಟ್ಟಿ ಅವರು, ನನ್ನ ತಂದೆ-ತಾಯಿಯ, ಗುರು ಹಿರಿಯರ ಹಾಗೂ ಎಲ್ಲಾ ಜಾತಿ ಧರ್ಮದ ಸಹೃದಯಿಗಳ ಆಶೀರ್ವಾದ ಫಲದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಕಾರ್ಯಸಾಧನೆಯ ಹಿನ್ನೆಲೆಯಲ್ಲಿ ಅನೇಕ ಸಮ್ಮಾನ, ಸತ್ಕಾರ ನನ್ನ ಪಾಲಿಗೆ ದಕ್ಕಿದೆ. ಆದರೆ ಇಂದಿನ ಈ ಸಮ್ಮಾನ ನನ್ನ ಜೀವನದ ಶ್ರೇಷ್ಠ ಸಮ್ಮಾನ ಎಂದು ಹೇಳಲು ಅಭಿಮಾನವಾಗುತ್ತಿದೆ. ಯಾಕೆಂದರೆ ಇಂದು ನಾನು ನನ್ನ ಮನೆಯಲ್ಲಿ, ನನ್ನವರ ಸಮ್ಮುಖದಲ್ಲಿ ಸಮ್ಮಾನವನ್ನು ಸ್ವೀಕರಿಸಿದ್ದೇನೆ. ನನಗೆ ದಕ್ಕಿದ ಈ ಸಮ್ಮಾನದ ಖುಷಿಯೇ ಅವಿಸ್ಮರಣೀಯವಾಗಿದೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಇನ್ನೋರ್ವ ಸಮ್ಮಾನಿತ ದೇವದಾಸ್ ಶೆಟ್ಟಿ ಅವರು ಮಾತನಾಡಿ, ನಾನು ಬಿಡಿಸಿದ ಚಿತ್ರದೊಂದಿಗೆ ಮಾತನಾಡುತ್ತಾ ನನ್ನ ಕಲಾ ಜೀವನದ ಬದುಕಿಗೆ 50 ವರ್ಷ ಸಂದಿದೆ. ನನ್ನ ಸುದೀರ್ಘ ಸೇವೆಯನ್ನು ಪರಿಗಣಿಸಿ ಮುಲುಂಡ್ ಬಂಟ್ಸ್ ನನ್ನನ್ನು ಇಂದು ಈ ಘನ ವೇದಿಕೆಯಲ್ಲಿ ಸಮ್ಮಾನಿಸಿದೆ ಎಂದು ಭಾವಿಸುತ್ತೇನೆ. ತನ್ನ ಕಲಾ ಬದುಕಿನುದ್ದಕ್ಕೂ ನಿರಂತರ ಸಹಕರಿಸಿದ, ಪ್ರೋತ್ಸಾಹಿಸಿದ ಮಹಾನೀಯರನ್ನು ಹಾಗೂ ತನ್ನ ಪತ್ನಿàಯ ಸಂಪೂರ್ಣ ಸಹಾಯ, ಸಹಕಾರವನ್ನು ಸ್ಮರಿಸಿ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮುಲುಂಡ್ ಬಂಟ್ಸ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಷನ್ ಇದರ ಕಾರ್ಯಾಧ್ಯಕ್ಷ ಡಾ| ಮೋಹನ್ ಆಳ್ವ, ಗೌರವ ಅತಿಥಿಯಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ವಿ. ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು, ಸಂಸ್ಥೆಯ ಉಪಾಧ್ಯಕ್ಷ ವಸಂತ್ ಎನ್. ಶೆಟ್ಟಿ ಪಲಿಮಾರು, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವೇಣುಗೋಪಾಲ್ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎನ್. ಶೆಟ್ಟಿ, ಗೌರವ ಕೋಶಾಧಿಕಾರಿ ಎ. ಹರ್ಷವರ್ಧನ ಶೆಟ್ಟಿ, ಜತೆ ಕಾರ್ಯದರ್ಶಿ ಸುಧಾಕರ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನುತಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮೋಹಿತ್ ಎಂ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಎಸ್. ಬಿ. ಶೆಟ್ಟಿ, ಡಾ| ಸತ್ಯಪ್ರಕಾಶ್ ಶೆಟ್ಟಿ, ಟ್ರಸ್ಟಿ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಜತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿದರು. ಸುವನೀತ್ ಶೆಟ್ಟಿ ಮತ್ತು ಲಹರಿ ಶೆಟ್ಟಿ ಅವರು ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ