ಅಂಕೋಲಾ: ರೈಲ್ವೆ ಸಿಬ್ಬಂದಿಯೋರ್ವರ ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯಿಂದ ಸಂಬವಿಸಬಹುದಾದ ಭಾರೀ ರೈಲು ದುರಂತವೊಂದು ತಪ್ಪಿದ ಘಟನೆ ತಾಲೂಕಿನ ಹಾರವಾಡ ರೈಲ್ವೆ ಸ್ಟೇಶನ್ ವ್ಯಾಪ್ತಿಯಲ್ಲಿ ಅ.9ರ ಬುಧವಾರ ನಡೆದಿದೆ.
ಹಾರವಾಡ ಸ್ಟೇಷನ್ ಸೀನಿಯರ್ ಟ್ರ್ಯಾಕ್ ಮ್ಯಾನ್ ಛತ್ರಪತಿ ಆನಂದು ಗೌಡ ಅವರ ಕರ್ತವ್ಯ ಮತ್ತು ಸಮಯ ಪ್ರಜ್ಞೆಗೆ ರೈಲು ಅಧಿಕಾರಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬೆಳಗಿನ 4.49 ಗಂಟೆಗೆ ತಾಂತ್ರಿಕ ದೋಷದಿಂದ ರೈಲು ಹಳಿಯ ಜೋಡನೆ ತುಂಡಾಗಿರುವುದನ್ನು ಗಮನಿಸಿದ ಛತ್ರಪತಿ ಕೂಡಲೇ ಸ್ಟೇಷನ್ ಮಾಸ್ಟರ್ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಮೂಲಕ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ ಮಡಗಾಂವ ವಿಭಾಗೀಯ ಹಿರಿಯ ಅಧಿಕಾರಿ ಎ.ಇ.ಎನ್. ಹಾರವಾಡಕ್ಕೆ ಆಗಮಿಸಿ ಛತ್ರಪತಿ ಆನಂದು ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾರವಾರ ಎಸ್ಎಸ್ಇ ಶೇಷಗಿರಿ, ಕುಮಟಾ ಸ್ಟೇಶನ್ ಜೆ.ಇ ಪಂಕಜ, ಹಾರವಾಡ ಸ್ಟೇಷನ್ ಮಾಸ್ಟರ್ ಶೆಟ್ಟಿ, ಹಾರವಾಡ ಸ್ಟೇಷನ್ ಆಪರೇಟಿಂಗ್, ಎಂಜಿನಿಯರಿಂಗ್ ಸಿಬ್ಬಂದಿಗಳು, ಸಿಗ್ನಲ್ ಮ್ಯಾನ್ ಗಳು ಉಪಸ್ಥಿತರಿದ್ದರು.