Advertisement

ನಿರ್ವಹಣೆಯಿಲ್ಲದೆ ಸೊರಗಿದ ಮಲ್ಪೆ ಬೀಚ್‌

09:56 PM Sep 07, 2020 | mahesh |

ಮಲ್ಪೆ: ಹೈಮಾಸ್ಟ್‌ ದೀಪ ಉರಿಯುತ್ತಿಲ್ಲ ; ಬೀಚ್‌ ಸುತ್ತಲೂ ಕಸದ ರಾಶಿ ಪ್ರವಾಸಿಗರ ಆಕರ್ಷಣೀಯ ತಾಣ ಮಲ್ಪೆ ಬೀಚ್‌ ಲಾಕ್‌ಡೌನ್‌ ಅನಂತರ ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿದೆ. ತೆರವುಗೊಳ್ಳದ ತ್ಯಾಜ್ಯ, ಕಸ ಕಡ್ಡಿಗಳ ರಾಶಿ, ಉರಿಯದ ದೀಪ, ಪ್ರವಾಸಿಗರ ನೆಮ್ಮದಿ ಕೆಡಿಸುವಂತಿದೆ. ಈ ಹಿಂದೆ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಯ ಟೆಂಡರ್‌ ಅವಧಿ ಮೇ ತಿಂಗಳಲ್ಲಿ ಮುಗಿದಿದ್ದು, ಹೊಸ ಟೆಂಡರ್‌ ಪ್ರಕ್ರಿಯೆಗಳು ನಡೆಯುತ್ತಿವೆ. ಹಾಗಾಗಿ ಯಾವುದೇ ನಿರ್ವಹಣೆಯ ಕೆಲಸಗಳು ನಡೆಯುತ್ತಿಲ್ಲ ಎನ್ನಲಾಗಿದೆ.

Advertisement

ಪ್ರವಾಸಿಗರ ಸಂಖ್ಯೆ ಹೆಚ್ಚಳ
ಲಾಕ್‌ಡೌನ್‌ ವೇಳೆ ಬಿಕೋ ಎನ್ನುತ್ತಿದ್ದ ಬೀಚ್‌ಗೆ ಈಗ ಮತ್ತೆ ಜನರು ಬರಲಾರಂಭಿಸಿದ್ದಾರೆ. ಪ್ರವಾಸಿಗರ ಸಂಖ್ಯೆ ಏರತೊಡಗಿದ್ದು ವಾರಾಂತ್ಯದಲ್ಲಿ ಪ್ರವಾಹದಂತೆ ಜನರು ಹರಿದುಬರುತ್ತಿದ್ದಾರೆ. ಈ ಹೊತ್ತಿನಲ್ಲಿ ಬೀಚ್‌ ನಿರ್ವಹಣೆ ಮಾಡದೇ ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ತೆಪ್ಪಗೆ ಕುಳಿತಿರುವುದು ನಿರ್ಲಕ್ಷ್ಯತನ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೆಟ್ಟು ಹೋದ 3 ಹೈಮಾಸ್ಟ್‌
ಕಡಲತೀರಕ್ಕೆ ಹೊಂದಿಕೊಂಡು ರಸ್ತೆಯಲ್ಲಿ ಅಳವಡಿಸಲಾದ ಮೂರು ಹೈಮಾಸ್‌ದೀಪ ಕೆಟ್ಟು ಹೋಗಿ ಮೂರು ತಿಂಗಳಾದರೂ ಇನ್ನೂ ಸರಿಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಗಾಂಧಿ ಸರ್ಕಲ್‌ ಬಳಿಯಲ್ಲಿದ ಶೋ ಲೈಟ್‌ಗಳು ಉರಿಯುತ್ತಿಲ್ಲ. ಸಂಜೆಯಾದ ಬಳಿಕ ಸಂಪೂರ್ಣ ಕತ್ತಲು ಇರುವುದರಿಂದ ಮದ್ಯಪಾನ ಪ್ರಿಯರಿಗೆ ಅನುಕೂಲವಾಗಿದೆ. ಪಾರ್ಟಿಗಳೂ ನಡೆಯುತ್ತಿದ್ದು, ಮದ್ಯದ ಬಾಟಲಿಗಳು ಮರಳ ದಂಡೆಯಲ್ಲಿ ಹರಡಿಕೊಂಡಿರುತ್ತದೆ. ದಾರಿ ದೀಪವಿಲ್ಲದ್ದರಿಂದ ವಾಕಿಂಗ್‌ ಹೋಗುವವರಿಗೆ ಸಮಸ್ಯೆಯಾಗುತ್ತಿದೆ. ಬೀದಿ ನಾಯಿಗಳ ಕಾಟವೂ ಹೆಚ್ಚಿದೆ.

ಕಸದ ರಾಶಿ
ಸಮುದ್ರದ ಅಲೆಗಳೊಂದಿಗೆ ಬಂದ ತ್ಯಾಜ್ಯ, ಕಸಗಳು ಬೀಚ್‌ ಉದ್ದಕ್ಕೂ ಹರಡಿಕೊಂಡಿದ್ದು ಅವುಗಳನ್ನು ತೆರವು ಮಾಡಿಲ್ಲ. ಗಿಡಗಂಟಿಗಳು ಬೆಳೆದಿವೆ. ಬೀಚ್‌ ಮುಖ್ಯದ್ವಾರದ ಬಳಿಯಲ್ಲೂ ಕಸದ ರಾಶಿ ಸುರಿಯಲಾಗಿದೆ. ಬೀಚ್‌ ಗಾಂಧಿ ಸರ್ಕಲ್‌ ಬಳಿ ಇರಿಸಲಾಗಿದ್ದ ಕಸ‌ದ ತೊಟ್ಟಿಗಳಿಗೆ ದಾರಿಯಲ್ಲಿ ಸಾಗುವ ಹೊರಗಿನ ಮಂದಿ ತ್ಯಾಜ್ಯಗಳ ಕಟ್ಟು ಎಸೆದು ಹೋಗುತ್ತಾರೆ. ಸದ್ಯ ಹೊಸ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಸ್ವತ್ಛತೆ ದೃಷ್ಟಿಯಿಂದ ಎರಡು ಮೂರು ಜನರನ್ನು ನೇಮಿಸಿ ಮಧ್ಯೆ ಮಧ್ಯೆ ಸ್ವತ್ಛಗೊಳಿಸುತ್ತಿದ್ದೇವೆ ಎಂದು ಈ ಹಿಂದೆ ನಿರ್ವಹಣೆ ನಡೆಸುತ್ತಿದ್ದ ಸುದೇಶ್‌ ಶೆಟ್ಟಿ ಅವರು ತಿಳಿಸಿದ್ದಾರೆ.

ನಿರ್ವಹಣೆ ಸಮಸ್ಯೆ
ಬೀಚ್‌ ನಿರ್ವಹಣೆ ನಡೆಯುತ್ತಿಲ್ಲ. ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಹೈಮಾಸ್ಟ್‌ಗಳು ಕೆಟ್ಟಿವೆ. ಅತೀ ಶೀಘ್ರದಲ್ಲಿ ವ್ಯವಸ್ಥಿತ ಸೌಕರ್ಯವನ್ನು ರೂಪಿಸುವಲ್ಲಿ ಬೀಚ್‌ ಅಭಿವೃದ್ಧಿ ಸಮಿತಿ ಮುಂದಾಗಬೇಕಾಗಿದೆ.
-ಪಾಂಡುರಂಗ ಮಲ್ಪೆ,  ಮಾಜಿ ನಗರಸಭೆ, ಸದಸ್ಯರು

Advertisement

ಪ್ರಕ್ರಿಯೆ ನಡೆಯುತ್ತಿದೆ
ಈಗಾಗಲೇ ಹೊಸ ಟೆಂಡರ್‌ ಅನುಮೋದನೆಯಾಗಿದೆ. ತಾಂತ್ರಿಕ ಪಕ್ರಿಯೆಗಳು ನಡೆಯುತ್ತಿದೆ. ಸ್ವಚ್ಛತೆ, ಲೈಟ್‌ಗಳ ದುರಸ್ತಿ ಕಾರ್ಯಗಳನ್ನು ಶೀಘ್ರವಾಗಿ ನಡೆಸಲಾಗುವುದು. ಸೆ. 16ರಿಂದ ವ್ಯವಸ್ಥಿತವಾಗಿ ಪೂರ್ಣ ಪ್ರಮಾಣದಲ್ಲಿ ಮಲ್ಪೆ ಬೀಚ್‌ ತೆರೆದುಕೊಳ್ಳಲಿದೆ.
-ಆನಂದ ಸಿ. ಕಲ್ಲೋಳಿಕರ್‌, ಪೌರಾಯುಕ್ತರು, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next