ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಸ್ಥಳೀಯರ ಎಚ್ಚರಿಕೆಯನ್ನು ಉಲ್ಲಂ ಸಿ ನೀರಿಗಿಳಿಯುವ ಪ್ರವಾ ಸಿಗರು ನೀರುಪಾಲಾಗುವ ಘಟನೆಗಳು ದಿನೇ ದಿನೆ ಹೆಚ್ಚುತ್ತಿವೆ.
ಬುಧವಾರ ಸಮುದ್ರ ಪಾಲಾಗುತ್ತಿದ್ದ ಶಿವಮೊಗ್ಗದ ಮೂವರು ಯುವಕರನ್ನು ರಕ್ಷಿಸಲಾಗಿತ್ತು. ಗುರುವಾರ ಮಧ್ಯಾಹ್ನ ಘಟನೆ ಮರುಕಳಿಸಿದ್ದು, ಎರಡು ಪ್ರತ್ಯೇಕ ಘಟನೆಗಳಲ್ಲಿ ಮುಳುಗಡೆಯಾಗುತ್ತಿದ್ದ ನಾಲ್ವರು ಯುವಕರನ್ನು ರಕ್ಷಿಸಲಾಗಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಮಂಡ್ಯ ಜಿಲ್ಲೆಯ ನೆರೆಕರೆ ಗ್ರಾಮದ ನಿತಿನ್ (18) ಅವರನ್ನು ರಕ್ಷಿಸಲಾಯಿತು. ಬಳಿಕ ಅಪರಾಹ್ನ 3 ಗಂಟೆಯ ವೇಳೆಯಲ್ಲಿ ಸಮುದ್ರ ಅಲೆಗಳ ಸೆಳೆತಕ್ಕೆ ಸಿಲುಕಿದ ಕಲಬುರ್ಗಿ ಜಿಲ್ಲೆಯ ರಾಮ ಮಂದಿರದ ನಿವಾಸಿ ಅನಿಲ್ ಕುಮಾರ್ (21), ಅಬ್ಬಾಸ್ ಅಲಿ (19) ಮತ್ತು ಅನಿಲ್ ಕುಮಾರ್ (19) ಅವರನ್ನು ರಕ್ಷಿಸಲಾಯಿತು.
ಜೀವ ರಕ್ಷಕ ತಂಡದವರು ಜೆಸ್ಕಿ ಮೂಲಕ ರಕ್ಷಣಾ ಕಾರ್ಯ ನಡೆಸಿದರು. ಈ ನಾಲ್ವರಿಗೂ ಮೊದಲೇ ಜೀವರಕ್ಷಕ ತಂಡದವರು ಎಚ್ಚರಿಕೆ ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ನೀರಿಗಿಳಿದ್ದರು ಎನ್ನಲಾಗಿದೆ.
ಮಳೆಗಾಲದಲ್ಲಿ ಸಮುದ್ರ ಅಬ್ಬರದಿಂದ ಕೂಡಿದ್ದಾಗ ಯಾರೂ ನೀರಿಗೆ ಇಳಿಯದಂತೆ ಬಲೆ ಕಟ್ಟಲಾಗಿತ್ತು. ಕಳೆದ ವಾರವಷ್ಟೇ ಇದನ್ನು ತೆರವುಗೊಳಿಸಲಾಗಿತ್ತು. ಅನಂತರ ಎರಡು ಘಟನೆಗಳು ಸಂಭವಿಸಿವೆ.