Advertisement

ಮಲ್ಪೆ: ನಾಲ್ಕನೇ ಹಂತದ ಮೀನುಗಾರಿಕಾ ಬಂದರು ಯೋಜನೆ

12:50 AM Jan 25, 2019 | Harsha Rao |

ಉಡುಪಿ: ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಯಾಂತ್ರೀಕೃತ ಬೋಟುಗಳ ಸಂಖ್ಯೆ ಹೆಚ್ಚುತ್ತಿದ್ದು, ನಾಲ್ಕನೇ ಹಂತದ ಯೋಜನೆಗೆ ಹಳೇ ಮೀನುಗಾರಿಕಾ ಬಂದರು ಸಮೀಪ ಜಾಗ ಗುರುತಿಸಲಾಗಿದೆ. ಈ ಬಗ್ಗೆ ಮೀನುಗಾರಿಕಾ ಇಲಾಖೆಯು ಬಂದರು ಇಲಾಖೆಗೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಬಂದರು ಇಲಾಖೆಯ ಅನುಮೋದನೆ ಮಾತ್ರ ಬಾಕಿಯಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ಸುಮಾರು 10 ಕೋ.ರೂ. ವೆಚ್ಚದ ಯೋಜನೆ ಇದಾಗಿದೆ. 

Advertisement

ಈ ಹಿಂದೆ ಪಡುಕೆರೆಯಲ್ಲಿ 4ನೇ ಹಂತದ ಯೋಜನೆ ರೂಪಿಸಲು ತೀರ್ಮಾನಿಸಲಾಗಿತ್ತು. ಆದರೆ ಸಣ್ಣ ಪ್ರಮಾಣದ (ನಾಡದೋಣಿ) ಮೀನುಗಾರಿಕೆ ನಡೆಸುವವರಿಗೆ ಇದರಿಂದ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಆ ಪ್ರಸ್ತಾವವನ್ನು ಕೈಬಿಡಲಾಗಿದೆ. ಜಟ್ಟಿ ನಿರ್ಮಾಣವಾಗಿ ದೊಡ್ಡ ಗಾತ್ರದ ಯಾಂತ್ರೀಕೃತ ಬೋಟುಗಳು ನಿಲುಗಡೆಯಾದರೆ ಮೀನುಗಾರಿಕೆಗೆ ಅನನುಕೂಲವಾಗುತ್ತದೆ ಎಂದು ಸ್ಥಳೀಯರು ವಿರೋಧಿಸಿದ್ದರು.

ಮಲ್ಪೆಯಲ್ಲಿರುವ 1, 2 ಮತ್ತು 3ನೇ ಹಂತದಲ್ಲಿ ಬೋಟುಗಳು ನಿಲುಗಡೆಯಾಗುತ್ತಿದ್ದು, ಯಾಂತ್ರೀಕೃತ ಬೋಟುಗಳ ಸಂಖ್ಯೆಯ ಹೆಚ್ಚಳದಿಂದಾಗಿ 4ನೇ ಹಂತದ ಯೋಜನೆ ಅಗತ್ಯವಾಗಿದೆ.

ಪ್ರಸ್ತುತ ಬಂದರಿನಲ್ಲಿ 2100 ಯಾಂತ್ರೀ ಕೃತ ಬೊಟುಗಳಿದ್ದು, ಆಳಸಮುದ್ರದಲ್ಲಿ ಕಾರ್ಯಾಚರಿಸುವ 1,100 ಬೋಟು ಗಳಿವೆ. 150 ಪರ್ಸಿನ್‌ ಸಹಿತ ಇತರ 800 ಯಾಂತ್ರೀಕೃತ ಬೋಟುಗಳು ಇಲ್ಲಿವೆ.

ಪ್ರಥಮ ಹಾಗೂ ಎರಡನೇ ಹಂತದಲ್ಲಿ 800 ಬೋಟುಗಳು ನಿಲುಗಡೆ ಸಾಮರ್ಥ್ಯ ಹೊಂದಿದ್ದು, 3ನೇ ಹಂತದಲ್ಲಿ 600 ಬೋಟುಗಳು ನಿಲುಗಡೆಯಾಗಬಹುದು. ನಾಲ್ಕನೆಯ ಹಂತದ ಯೋಜನೆಯಲ್ಲಿ 400 ಬೋಟುಗಳು ನಿಲುಗಡೆಗೊಳ್ಳಬಹುದು. ಇದರಿಂದ ಈಗಾಗಲೇ ಸ್ಥಳಾಭಾವದಿಂದ ಉಂಟಾಗುತ್ತಿದ್ದ ಅನೇಕ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ. 

Advertisement

ಕೆಲವೊಂದು ಬಾರಿ ಹವಾಮಾನ ವೈಪರೀತ್ಯ ಉಂಟಾದಾಗ ಇತರ ಭಾಗದ ಬೋಟುಗಳು ಕೂಡ ಇಲ್ಲಿಗೆ ಬಂದು ಲಂಗರು ಹಾಕುವ ಪ್ರಮೇಯವೂ ಇದೆ. ಇದರಿಂದ ಇಲ್ಲಿ ಬೋಟುಗಳ ದಟ್ಟನೆಯೂ ಉಂಟಾಗುತ್ತದೆ. ನಾಲ್ಕನೆಯ ಹಂತದ ಯೋಜನೆ ಪ್ರಾರಂಭಗೊಂಡರೆ ಸುಮಾರು 400ರಷ್ಟು ಬೋಟುಗಳನ್ನು ನಿಲುಗಡೆ ಮಾಡಬಹುದು.
– ಪಾರ್ಶ್ವನಾಥ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು, ಉಡುಪಿ ಜಿಲ್ಲೆ 

ನಾಲ್ಕನೇ ಹಂತದ ಯೋಜನೆಯಲ್ಲಿ ಸುಮಾರು 400ರಿಂದ 500ರಷ್ಟು ಬೋಟುಗಳು ನಿಲುಗಡೆಗೆ ಅವಕಾಶ ಲಭಿಸಲಿದ್ದು, ಮೀನುಗಾರರಿಗೆ ಅನುಕೂಲವಾಗಲಿದೆ.
-ಸತೀಶ್‌ ಕುಂದರ್‌,  ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ. 

Advertisement

Udayavani is now on Telegram. Click here to join our channel and stay updated with the latest news.

Next