Advertisement

ಮಲ್ಪೆ: 304 ಕೋಟಿ ರೂ. ವೆಚ್ಚದಲ್ಲಿ ಬಂದರು ನಿರ್ಮಾಣ: ಸಚಿವ ಅಂಗಾರ

01:20 AM Mar 17, 2022 | Team Udayavani |

ಬೆಂಗಳೂರು: ಉಡುಪಿ ಜಿಲ್ಲೆಯ ಮಲ್ಪೆಯ ಕಡಲ ತೀರದಲ್ಲಿ 304 ಕೋಟಿ ರೂ. ವೆಚ್ಚದಲ್ಲಿ ಮರಿನಾ ಹಾಗೂ ವಿವಿಧೋದ್ದೇಶ ಬಂದರು ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರಕಾರದ ಸಾಗರ ಮಾಲಾ ಕೋಶಕ್ಕೆ ಸಲ್ಲಿಸಲಾಗಿದೆ. ಯೋಜನೆಗೆ ಅನುಮೋದನೆ ದೊರಕಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ.

Advertisement

ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ಪ್ರಶ್ನೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ವಿಧಾನಪರಿಷತ್ತಿನಲ್ಲಿ ಮಂಡಿಸಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.

ಈ ಯೋಜನೆಯಡಿ ದೇಶಿಯ ಮತ್ತು ವಿದೇಶಿ ಬೋಟ್‌ಗಳು ಮತ್ತು ಯಾಚ್‌ಗಳಿಗೆ ತಂಗಲು ತೇಲುವ ಜೆಟ್ಟುಗಳನ್ನು ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಈ ಯೋಜನೆ ಮೀನುಗಾರಿಕೆ ಬಂದರಿನಿಂದ ದಕ್ಷಿಣಕ್ಕೆ ಇರುವುದರಿಂದ ಮೀನುಗಾರಿಕೆಗೆ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ಪರಿಸರಕ್ಕೆ ತೊಂದರೆ ಉಂಟಾಗುವ ಬಗ್ಗೆ ಪರಿಸರ ಅಧ್ಯಯನ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ.

ಜತೆಗೆ ಈ ಯೋಜನೆಯಡಿ ಜಲಾಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರಿಂದ ಪ್ರವಾಸೋದ್ಯಮ ಮತ್ತು ಇತರ ಪೂರಕ ಚಟುವಟಿಕೆಗಳಿಗೆ ಉಪಯೋಗವಾಗಲಿದೆ. ಈ ಯೋಜನೆಯಿಂದ ನೇರವಾಗಿ ಸುಮಾರು 100 ಜನರಿಗೆ ಮತ್ತು ಪರೋಕ್ಷವಾಗಿ 500 ಜನರಿಗೆ ಉದ್ಯೋಗ ಸಿಗಲಿದೆ.

ಮೀನುಗಾರಿಕೆ ಅಭಿವೃದ್ಧಿಗೆ 28 ಯೋಜನೆಗಳ ಪ್ರಸ್ತಾಪ
ಬೆಂಗಳೂರು: ಕರಾವಳಿ ಭಾಗದಲ್ಲಿ ಮೀನುಗಾರಿಕೆ ಮತ್ತು ಸಂಬಂಧಪಟ್ಟ ಅಭಿವೃದ್ಧಿಗಾಗಿ ವಿವಿಧ ಪ್ರಕಾರದ 28 ಯೋಜನೆಗಳ ಪ್ರಸ್ತಾವನೆಗಳನ್ನು ರಾಜ್ಯ ಸರಕಾರವು ಕೇಂದ್ರಕ್ಕೆ ಕಳುಹಿಸಿದೆ ಎಂದು ಸಚಿವ ಎಸ್‌. ಅಂಗಾರ ತಿಳಿಸಿದರು.

Advertisement

ಬುಧವಾರ ಬಜೆಟ್‌ ಮೇಲಿನ ಚರ್ಚೆ ವೇಳೆ ಜೆಡಿಎಸ್‌ನ ಬಿ.ಎಂ. ಫಾರೂಕ್‌ ಮಾತನಾಡಿ, ಕರಾವಳಿಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಸರಕಾರವು ಕರಾವಳಿಯನ್ನು ಕಡೆಗಣಿಸಬಾರದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಕಾರಣಕ್ಕೂ ಕರಾವಳಿಯನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಈಗಾಗಲೇ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದು, ಆ ಪೈಕಿ ಕೆಲವು ಯೋಜನೆಗಳನ್ನು ಕೇಂದ್ರಕ್ಕೂ ಕಳುಹಿಸಿಕೊಡಲಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next