Advertisement

ಇನ್ನು ಮಲ್ಪೆ ಬಂದರು ತಂಬಾಕು ಮುಕ್ತ 

04:05 PM Dec 16, 2017 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕಾ ಬಂದರಿನೊಳಗೆ ಇನ್ನು ಮುಂದೆ ಯಾರೂ ಗುಟ್ಕಾ, ಪಾನ್‌ ಜಗಿಯುವಂತಿಲ್ಲ, ಉಗಿಯುವಂತಿಲ್ಲ, ಸಿಗರೇಟು ಸೇದುವಂತಿಲ್ಲ. ಕಾರಣ ಇನ್ನು ಮುಂದೆ  ಮಲ್ಪೆ ಬಂದರು ತಂಬಾಕು ಮುಕ್ತ ಬಂದರು ಆಗಿ ಬದಲಾಗಲಿದೆ.

Advertisement

ಇದು ಸರಕಾರ ಮಾಡಿದ ಕಾನೂನಲ್ಲ. ಬದಲಾಗಿ ಮೀನುಗಾರರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಮತ್ತು ಬಂದರನ್ನು ಸ್ವತ್ಛವಾಗಿಡುವ ನಿಟ್ಟಿನಲ್ಲಿ ಮಲ್ಪೆ ಮೀನುಗಾರ ಸಂಘ ಈ ನಿರ್ಧಾರವನ್ನು ಕೈಗೊಂಡಿದೆ.
ಗುಟ್ಕಾ ಚಟಕ್ಕೆ ವಯಸ್ಸಿನ ಭೇದ ಇಲ್ಲ. ಬಂದರಿನಲ್ಲಿ ಹಲವರು ಚಟಕ್ಕೆ ಬಿದ್ದು ಗುಟ್ಕಾ ತಿಂದು ಕಂಡಲ್ಲಿ ರೂಢಿಯಾಗಿದೆ. ಬೋಟಿನಿಂದ ಮೀನು ವಿಲೇವಾರಿ ಮಾಡುವ ವೇಳೆ ಮೀನುಗಳ ಮೇಲೆ ಉಗಿಯುವುದು, ಅದರ ಪ್ಯಾಕೆಟ್‌ ಅನ್ನು ಕಂಡಲ್ಲಿ ಬಿಸಾಕಿ ಪರಿಸರ ಮಾಲಿನ್ಯವಾಗುತ್ತಿದೆ.  

ಈ ಸಂಬಂಧ ಬಂದರು ಆವರಣವನ್ನು ತಂಬಾಕು ಮುಕ್ತ ವಲಯವನ್ನಾಗಿ ಘೋಷಿಸಲಾಗುತ್ತಿದೆ. ಪೂರಕವಾಗಿ ತಂಬಾಕು ಸೇವನೆ ಮತ್ತು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಬಂದರು ಆವರಣದ ಹೊರಗಿನ ಅಂಗಡಿಗಳಲ್ಲೂ ತಂಬಾಕು ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ.  

ನಿರ್ಬಂಧದ ಹೆದರಿಕೆ 
ಭಾರತದಿಂದ ವರ್ಷಕ್ಕೆ 36 ಸಾವಿರ ಕೋಟಿ ರೂ.ಗಳಷ್ಟು ಮೌಲ್ಯದ ಮೀನು, ಮೀನಿನ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತವೆ. ಅದರಲ್ಲೂ ಹೆಚ್ಚಾಗಿ ಐರೋಪ್ಯ ಒಕ್ಕೂಟಕ್ಕೆ ಮೀನು ರಫ್ತಾಗುತ್ತದೆ. ಅಲ್ಲಿನ ತಂಡ ಬಂದರು ಸ್ವತ್ಛತೆ, ಗುಣಮಟ್ಟ ಪರಿಶೀಲನೆ ನಡೆಸುತ್ತದೆ. ಈ ವೇಳೆ ಅಶುಚಿತ್ವ ಕಂಡರೆ ಮೀನು ರಫ್ತಿಗೆ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ ಎನ್ನುವ ಹೆದರಿಕೆಯೂ ಇದೆ.  

ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮತ್ತು ಮಾರಾಟವನ್ನು ನಿಷೇಧಿಸಿದ್ದೇವೆ. ಮುಂದೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ. ತಂಬಾಕಿನ ಕೆಟ್ಟ ಪರಿಣಾಮದ ಬಗ್ಗೆ ಜನರಿಗೆ ಅರಿವು ಮೂಡಿಸಲು ಜನಜಾಗೃತಿ ಅಭಿಯಾನ ಕೈಗೊಂಡಿದ್ದೇವೆ.  
ಸತೀಶ್‌ ಕುಂದರ್‌, ಅಧ್ಯಕ್ಷರು ಮಲ್ಪೆ ಮೀನುಗಾರ ಸಂಘ

Advertisement

ಮೀನುಗಾರಿಕಾ ಬಂದರಿನಲ್ಲಿ ತಂಬಾಕು, ಗುಟ್ಕಾ ನಿಷೇಧ ಮಾಡಿರುವುದು ಉತ್ತಮ ಕ್ರಮ. ನಮ್ಮ ವ್ಯಾಪಾರಕ್ಕೆ ಹೊಡೆತ ಉಂಟಾದರೂ ಮೀನುಗಾರ ಸಂಘ ಮತ್ತು ಇಲಾಖೆಯ ಈ ಆದೇಶಕ್ಕೆ ತಲೆಬಾಗಿ ಅಧಿಕೃತ ಅಂಗಡಿಗಳಲ್ಲಿ ಮಾರಾಟ ನಿಷೇಧಿಸಲಾಗಿದೆ. ಆದರೂ ಕಾಳಸಂತೆಯಲ್ಲಿ ತಂಬಾಕು ಮಾರಾಟವಾಗುತ್ತಿವೆ. ಈ ಬಗ್ಗೆ ಸಂಘ ಕ್ರಮ ತೆಗೆದುಕೊಳ್ಳಬೇಕು.  
ಅಶೋಕ್‌ ಎಸ್‌. ಸುವರ್ಣ, ಅಧ್ಯಕ್ಷರು, ಗಾಡಿ ಅಂಗಡಿ ವ್ಯಾಪಾರಸ್ಥರ ಸಂಘ

ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next