Advertisement
ಗುತ್ತಿಗೆ ಪಡೆದಿರುವ ಗೋವಾ ಮೂಲದ ಭಾರ್ಗವಿ ಕಂಪೆನಿಯ ಯಂತ್ರಗಳು ಬಂದರಿನ 3 ಬೇಸಿನ್‌ಗಳಲ್ಲಿ ಮತ್ತು ನ್ಯಾವಿಗೇಶನ್ ಚಾನೆಲ್‌ಗಳಲ್ಲಿ ತುಂಬಿಕೊಂಡಿರುವ ಸುಮಾರು 96 ಸಾವಿರ ಕ್ಯೂಬಿಕ್ ಮೀ. ಹೂಳನ್ನು ತೆರವುಗೊಳಿಸಲಾರಂಭಿಸಿವೆ.
ಸದ್ಯ 2 ಯಂತ್ರಗಳು, 30ಕ್ಕೂ ಹೆಚ್ಚು ಸಿಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಬೇಸಿನ್ 1 ಮತ್ತು 2ರಿಂದ ತೆಗೆದ ಹೂಳನ್ನು ದಕ್ಕೆಯಲ್ಲಿ ಸಂಗ್ರಹಿಸಲಾಗುತ್ತದೆ. ಇದಕ್ಕೆ ಉತ್ತಮ ಬೇಡಿಕೆ ಇರುವುದರಿಂದ ಒಣಗಿದ ಬಳಿಕ ಸ್ಥಳಾಂತರ ಮಾಡಲಾಗುತ್ತದೆ. ಬಂದರು ಪ್ರದೇಶದಿಂದ ತೆರವುಗೊಳಿಸಿದ ಹೂಳನ್ನು ಬಾರ್ಜ್‌ನ ಮೂಲಕ ಸುಮಾರು 8 ಕಿ.ಮೀ. ದೂರ ಅಳಸಮುದ್ರಕ್ಕೆ ಒಯ್ದು ಅಲ್ಲಿ ಸುರಿಯಲಾಗುತ್ತದೆ. ಕಡಲಿಗಿಂತ ಬಂದರು ಅಪಾಯ
7-8 ವರ್ಷಗಳಿಂದ ಹೂಳು ತೆರವುಗೊಳಿಸದ್ದರಿಂದ ಮಲ್ಪೆ ಬಂದರು ಮೃತ್ಯುಕೂಪವಾಗಿತ್ತು. ಮೀನುಗಾರರ ಪಾಲಿಗೆ ಕಡಲಿಗಿಂತ ಬಂದರಿನಲ್ಲಿ ತುಂಬಿರುವ ಹೂಳು ಸಂಚಕಾರ ತರುತ್ತಿತ್ತು. ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ 2016ರಿಂದ ಇಲ್ಲಿಯವರೆಗೆ 80ಕ್ಕೂ ಅಧಿಕ ಮಂದಿ ಮೀನುಗಾರ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನು ದಾಖಲೆಗೆ ಸಿಗದೇ ಮೃತಪಟ್ಟವರು ಹಲವರು. 60ಕ್ಕೆ ಹೆಚ್ಚು ಮಂದಿಯನ್ನು ಮುಳುಗು ತಜ್ಞ ಈಶ್ವರ ಮಲ್ಪೆ ರಕ್ಷಿಸಿದ್ದಾರೆ.
Related Articles
ಇಲ್ಲಿನ ಹೂಳಿನಿಂದಾಗಿ ಬೋಟು ಗಳ ಸಂಚಾರ ಕಷ್ಟಸಾಧ್ಯವಾಗಿತ್ತು. ಹೂಳು ಹೆಚ್ಚಾಗಿದ್ದ ಕಡೆ ಬೋಟುಗಳು ಸಿಲುಕಿ ಸಾಕಷ್ಟು ಹಾನಿಗೀಡಾಗುತ್ತಿದ್ದವು. ಇದು ಬಂದರಿನ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ರಾಜ್ಯದ ಪ್ರಮುಖ ಬಂದರಾಗಿ ಗುರುತಿಸಿಕೊಂಡಿರುವ ಮಲ್ಪೆಯು ಭಟ್ಕಳ, ಬೈಂದೂರು, ಶಿರೂರು, ಭಾಗಗಳಿಂದ ಬರುವ ಬೋಟುಗಳಿಗೆ ತಂಗುದಾಣವಾಗಿದೆ. ಇಲ್ಲಿ 2,200ಕ್ಕಿಂತಲೂ ಹೆಚ್ಚು ಬೋಟುಗಳಿದ್ದು, ಕೋಟ್ಯಂತರ ರೂ. ವ್ಯವಹಾರ ನಡೆಯುತ್ತಿದೆ.
Advertisement
ಮೇ ಅಂತ್ಯಕ್ಕೆ ಪೂರ್ಣಬಂದರಿನ ಹೂಳೆತ್ತುವುದು ಮೀನುಗಾರರ ಬಹುಕಾಲದ ಬೇಡಿಕೆಯಾಗಿತ್ತು. ಇದೀಗ ಸರಕಾರದ ಮೇಲೆ ಒತ್ತಡ ಹೇರಿದ್ದರಿಂದ ಕೆಲಸ ಆರಂಭವಾಗಿದೆ. ಮೇ ಅಂತ್ಯದಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ 3 ಕೋ.ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಮಗ್ರ ಡ್ರೆಜ್ಜಿಂಗ್ ನಡೆಯಲಿದೆ. ಈಗಾಗಲೇ ಶೇ. 20 ಕೆಲಸ ಆಗಿದೆ. ಮಳೆ ಆರಂಭಗೊಳ್ಳುವ ಮೊದಲು ಕೆಲಸವನ್ನು ಪೂರ್ಣಗೊಳಿಸಲಿದ್ದೇವೆ.
– ಕೆ. ಕುಮಾರಸ್ವಾಮಿ, ಉಪ ನಿರ್ದೇಶಕರು, ಮೀನುಗಾರಿಕೆ ಬಂದರು ಯೋಜನೆ, ಮಲ್ಪೆ – ನಟರಾಜ್ ಮಲ್ಪೆ