Advertisement

Malpe port: ಸರ್ವಋತು ಬಂದರಿನಲ್ಲಿ ಬೋಟ್‌ ನಿಲುಗಡೆಗಿಲ್ಲ ಜಾಗ!

09:19 AM Aug 09, 2023 | Team Udayavani |

ಮಲ್ಪೆ: ಏಷ್ಯಾದ ಅತೀ ದೊಡ್ಡ ಸರ್ವಋತು ಮೀನುಗಾರಿಕೆ ಬಂದರು ಎಂಬ ಹೆಗ್ಗಳಿಕೆಯ ಮಲ್ಪೆ ಬಂದರಿನ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಮೀನುಗಾರರಿಗೆ ದೊಡ್ಡ ತಲೆನೋವಾಗಿದೆ. ಮುಖ್ಯವಾಗಿ ಮೀನುಗಾರರಿಗೆ ತಮ್ಮ ಬೋಟ್‌ಗಳನ್ನು ನಿಲ್ಲಿಸಲು ಬಂದರಿನೊಳಗೆ  ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ಹೊಳೆಯಲ್ಲೇ ನಿಲುಗಡೆ ಅನಿವಾರ್ಯವಾಗಿದೆ.

Advertisement

ಮಲ್ಪೆಯಲ್ಲಿ ವರ್ಷದ 365 ದಿನವೂ ಮೀನುಗಾರಿಕೆ ಚಟುವಟಿಕೆ ನಡೆಸಬಹುದು. ಮಂಗಳೂರು – ಕಾರವಾರ ನಡುವೆ ಇರುವ ಈ ಬಂದರಿನಲ್ಲಿ ವಾರ್ಷಿಕ ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುತ್ತಿದೆ.

ಅಪಾಯಕಾರಿ ಹೊಳೆಯಲ್ಲಿ ಲಂಗರು: 

ಮಳೆಗಾಲದ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮತ್ತು ಪ್ರಾಕೃತಿಕ ವಿಕೋಪದ ಸಂದರ್ಭ ಎಲ್ಲ ಬೋಟುಗಳೂ ಏಕಕಾಲಕ್ಕೆ ತೀರಕ್ಕೆ ಬಂದಾಗ ನಿಲ್ಲಿಸುವುದು ಎಲ್ಲಿ ಎಂಬ ಪ್ರಶ್ನೆ ತಲೆದೋರುತ್ತದೆ. ಬಹುತೇಕ ಬೋಟುಗಳನ್ನು ಹೊಳೆಯಲ್ಲಿ ಒಂದರ ಹಿಂದೆ ಒಂದರಂತೆ ಉದ್ದಕ್ಕೆ 10-13 ಸಾಲುಗಳಲ್ಲಿ ಲಂಗರು ಹಾಕಿ ನಿಲ್ಲಿಸಲಾಗುತ್ತದೆ. ಮಳೆಗಾಲದಲ್ಲಿ ಹೊಳೆಯ ನೀರು ರಭಸವಾಗಿರುವುದಲ್ಲದೆ ಸಮುದ್ರ ಸೇರುವಲ್ಲಿ ನದಿಯ ನೀರಿನ ಸೆಳೆತವೂ ಹೆಚ್ಚಾ ಗಿರುರುವುದರಿಂದ ಹಗ್ಗ ಕಡಿದು ಬೋಟು ಸಮುದ್ರ ಪಾಲಾಗುವುದು ಇದೆ. ಇಂತಹ ಹಲವು ನಿದರ್ಶನಗಳಿವೆ. ಅನ್ಯ ಮಾರ್ಗವಿಲ್ಲದೆ ಮೀನುಗಾರರು ಕೋಟ್ಯಂತರ ರೂ. ಮೌಲ್ಯದ ಬೋಟುಗಳನ್ನು ಹೊಳೆಯಲ್ಲೇ ನಿಲ್ಲಿಸುತ್ತಿದ್ದಾರೆ.

2,500 ಬೋಟುಗಳು: 

Advertisement

ಮಲ್ಪೆ ವ್ಯಾಪ್ತಿಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮೀನುಗಾರಿಕೆ ಬೋಟ್‌ಗಳಿವೆ. ಈಗಿರುವ ಬಂದರಿನ 1ಮತ್ತು 2ನೇ ಹಂತದ ಜೆಟ್ಟಿ, ಬಾಪುತೋಟದ ಬಳಿಯ 3ನೇ ಜೆಟ್ಟಿ, ಮಂಜು ದಕ್ಕೆಯ ಬಳಿ ನಬಾರ್ಡ್‌ ಯೋಜನೆಯಡಿ ನಿರ್ಮಾಣವಾದ ಹೊಸ ಜೆಟ್ಟಿಯಲ್ಲಿ 1 ಸಾವಿರ ಬೋಟ್‌ಗಳು ನಿಲ್ಲುವುದಕ್ಕಷ್ಟೇ ಅವಕಾಶವಿದೆ. ಉಳಿದ ಬೋಟುಗಳನ್ನು ಹೊಳೆಯಲ್ಲಿ ನಿಲ್ಲಿಸಬೇಕು. ಪ್ರಾಕೃತಿಕ ವಿಕೋಪದ ಸಮಯದಲ್ಲಿ ರಾಜ್ಯದ ಹೊರಬಂದರಿನ, ಹೊರ ರಾಜ್ಯದ ಬೋಟುಗಳು ಇಲ್ಲಿಗೆ ಬರುತ್ತವೆ.

ಔಟರ್‌ ಹಾರ್ಬರ್‌ಗೆ ಆಗ್ರಹ:

ಬಂದರಿಗೆ ದಕ್ಷಿಣ ಭಾಗದಲ್ಲಿ ಬಾದ್ರಕಡ ಲೈಟ್‌ಹೌಸ್‌, ಕೋಟೆ, ಮಾಲ್ತಿಕಲ್ಲು ಇರುವುದರಿಂದ ಇವೆಲ್ಲವನ್ನು ಆವರಿಸಿ ನೀರಿನ ತಡೆಮಾಡಿ ಔಟರ್‌ ಹಾರ್ಬರ್‌ ನಿರ್ಮಿಸಿದರೆ ಸುಮಾರು 5 ಸಾವಿರ ಬೋಟ್‌ಗಳನ್ನು ನಿಲ್ಲಿಸಬಹುದಾಗಿದೆ. ಜತೆಗೆ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಲು ವಿಪುಲ ಅವಕಾಶ ಇದೆ ಎಂಬ ಅಭಿಪ್ರಾಯ ಮೀನುಗಾರರದ್ದು. ಈ ಬಗ್ಗೆ ಕೇಂದ್ರ ಮೀನುಗಾರಿಕೆ ಸಚಿವ ಪರಷೋತ್ತಮ ರೂಪಾಲ ಅವರು ಮಲ್ಪೆಗೆ ಬಂದ ಸಂದರ್ಭದಲ್ಲಿ ಅವರಿಗೆ ಸ್ಥಳವನ್ನು ತೋರಿಸಿ ಮನವಿ ಮಾಡಿದ್ದಾರೆ. ರಾಜ್ಯ ಸರಕಾರಕ್ಕೂ ಮನವಿ ಮಾಡಲಾಗಿದೆ.

ಬಂದರಿನಲ್ಲಿ ನಿಲುಗಡೆಗೆ ಅವಕಾಶ ಇರುವುದಕ್ಕಿಂತ 3 ಪಟ್ಟು ಹೆಚ್ಚು ಬೋಟುಗಳಿವೆ. ಔಟರ್‌ ಹಾರ್ಬರ್‌ ಮಾಡಿದರೆ ಎಲ್ಲ ಸಮಸ್ಯೆ ಪರಿಹಾರ ಸಾಧ್ಯ. ಪಡುಕರೆ ಭಾಗದಲ್ಲಿ ಸೇತುವೆ ಹೊಂದಿಕೊಂಡು 1 ಸಾವಿರ ಮೀಟರ್‌ ಉದ್ದದ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ ಸರಕಾರಕ್ಕೆ, ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.– ದಯಾನಂದ ಕೆ. ಸುವರ್ಣ ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ 

ಇಲಾಖಾ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಅನುಭವದ ಕೊರತೆಯಿಂದಾಗಿ ಕೆಲವೊಂದು ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಬೋಟುಗಳ ಸಂಖ್ಯೆಗೆ ಅನುಗುಣವಾಗಿ ಜೆಟ್ಟಿ ವಿಸ್ತರಣೆ ಆಗಬೇಕು. ಮೀನುಗಾರಿಕೆ ಸಚಿವರು ಹೆಚ್ಚಿನ ಒತ್ತು ನೀಡಬೇಕು. ಶೀಘ್ರ ಸ್ಪಂದನೆಗೆ ಸರಕಾರದ ಮೇಲೆ ಒತ್ತಡ ಹೇರಲಾಗುವುದು.– ಯಶ್‌ಪಾಲ್‌ ಸುವರ್ಣ, ಶಾಸಕರು ಉಡುಪಿ

ಜೆಟ್ಟಿ ವಿಸ್ತರಣೆಯ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. ತಾಂತ್ರಿಕ ಪ್ರಕ್ರಿಯೆಗಳು ನಡೆದು ಸರಕಾರದ ಅನುಮೋದನೆ ದೊರೆಯಬೇಕಿದೆ.– ವಿವೇಕ್‌ ಆರ್‌. ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next