ಮಲ್ಪೆ: ಮಲ್ಪೆಯಿಂದ ಪಡುಕರೆ ಸಂಪರ್ಕ ಸೇತುವೆಯ ಆರಂಭದಲ್ಲಿರುವ ಕಾಂಕ್ರಿಟ್ ರಸ್ತೆಯ ಮಧ್ಯೆದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಹನಗಳ ಚಕ್ರಗಳನ್ನು ಹಿಡಿದಿಟ್ಟುಕೊಳ್ಳಲು ಬಾಯ್ದೆರೆದು ನಿಂತಂತೆ ಕಾಣುತ್ತಿದೆ.
ಮೂರನೇ ಹಂತದ ಬಂದರಿನ ಬಾಪುತೋಟದ ಭಾಗದಲ್ಲಿರುವ ಸೇತುವೆಯನ್ನು ಸಂಪರ್ಕಿಸುವ ಸುಮಾರು 100 ಮೀಟರ್ ವರೆಗೆ ರಸ್ತೆಯ ಉದ್ದಕ್ಕೆ ಎರಡು ಕಾಂಕ್ರಿಟ್ ಸ್ಲ್ಯಾಬ್‌ಗಳ ನಡುವೆ ಬಿರುಕು ಕಾಣಿಸಿಕೊಂಡಿದ್ದು, ಸುಮಾರು ಮೂರು ನಾಲ್ಕು ಇಂಚುಗಳಷ್ಟು ಅಗಲವಾದ ಬಿರುಕಿನಿಂದಾಗಿ ದ್ವಿಚಕ್ರ ವಾಹನಗಳ ಚಕ್ರ ಬಿರುಕಿನಲ್ಲಿ ಸಿಲುಕಿ ಮುಗ್ಗರಿಸುತ್ತಿವೆ.
ನಿತ್ಯ ಈ ರಸ್ತೆಯಲ್ಲಿ ಟನ್‌ಗಟ್ಟಲೆ ಭಾರವನ್ನು ಹೊತ್ತ ಘನವಾಹನಗಳು ಸಂಚರಿಸುತ್ತಿರುವುದು ಇಲ್ಲಿನ ರಸ್ತೆಯ ಹಾನಿಗೊಳಗಾಗಲು ಕಾರಣ ಎನ್ನಲಾಗುತ್ತಿದೆ. ದಿನ ಕಳೆದಂತೆ ರಸ್ತೆಯಲ್ಲಿನ ಬಿರುಕು ಆಗಲವಾಗುತ್ತಾ ಹೋಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಯಾವುದೇ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ :7 ಕಿ.ಮೀ ಹೊತ್ತು ತಂದರು ವೈದ್ಯರಿಲ್ಲದೆ ಆಸ್ಪತ್ರೆ ಎದುರೇ ತಾಯಿ-ಮಗು ಸಾವು
ರಸ್ತೆಯ ಮಧ್ಯೆಯಲ್ಲಿರುವ ಬಿರುಕಿನ ಗಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೂ ತರಲಾಗಿದೆ. ರಸ್ತೆ ಕುಸಿದು ಬೀಳುವ ಮೊದಲೇ ಈ ಅಪಾಯಕಾರಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ.
– ಆನಂದ ಪುತ್ರನ್ ಪಡುಕರೆ, ಸ್ಥಳೀಯರು