ಮಲ್ಪೆ / ಮಡಿಕೇರಿ: ಮಲ್ಪೆ ಬೀಚ್‌ನ ಸಮುದ್ರದಲ್ಲಿ ಆಟವಾಡುತ್ತಿದ್ದ ಮಡಿಕೇರಿ ಮೂಲದ ಇಬ್ಬರು ಬಾಲಕಿಯರು ಸಮುದ್ರಪಾಲಾದ ಘಟನೆ ಶನಿವಾರ ರಾತ್ರಿ 9ರ ಸುಮಾರಿಗೆ ಸಂಭವಿಸಿದ್ದು, ಒಬ್ಬಳು ಮುಳುಗಿ ಮೃತಪಟ್ಟರೆ ಮತ್ತೊಬ್ಬಳನ್ನು ರಕ್ಷಿಸಲಾಗಿದೆ.
ಮಡಿಕೇರಿ ನಗರದ ಗಿರಿಧರ ಅವರ ಪುತ್ರಿ ಮಾನ್ಯ (16) ಮೃತಪಟ್ಟವರು.
ಆಕೆಯ ಗೆಳತಿ ಮಡಿಕೇರಿಯ ಮೆಕೇರಿ ಗ್ರಾಮದ ಚಂದ್ರಶೇಖರ ಅವರ ಪುತ್ರಿ ಯಶಸ್ವಿನಿ (16) ರಕ್ಷಿಸಲ್ಪಟ್ಟವರು. ಇಬ್ಬರೂ ಮಡಿಕೇರಿಯ ಸೈಂಟ್ ಮೈಕಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು.
ನಾಲ್ಕು ದಿನಗಳ ಹಿಂದೆ ಕಾಲೇಜಿಗೆಂದು ಹೋದ ಇವರಿಬ್ಬರೂ ನಾಪತ್ತೆಯಾಗಿದ್ದರು. ಬಳಿಕ ಬೆಂಗಳೂರು, ಮಂಗಳೂರು ಮೊದಲಾದೆಡೆ ಸುತ್ತಾಡಿ, ಶನಿವಾರ ಪಣಂಬೂರು ಬೀಚ್ ವೀಕ್ಷಿಸಿ ಅಲ್ಲಿಂದ ಸಂಜೆ ಮಲ್ಪೆ ಬೀಚ್‌ಗೆ ಬಂದಿದ್ದರು. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಬೀಚ್‌ನ ಉತ್ತರ ಭಾಗದಲ್ಲಿ (ನೆಟ್ ಇಲ್ಲದ ಕಡೆ) ಕಲ್ಲು ಬಂಡೆಯಿಂದ ಕೆಳಗೆ ನೀರಿಗೆ ಇಳಿದು ಆಟವಾಡುತ್ತಿದ್ದರು. ಈ ವೇಳೆ ಅಬ್ಬರದ ಅಲೆಯ ಹೊಡೆತಕ್ಕೆ ಸಿಲುಕಿ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೆನ್ನಲಾಗಿದೆ.
ತತ್‌ಕ್ಷಣ ಇದು ಸ್ಥಳೀಯರ ಗಮನಕ್ಕೆ ಬಂದಿದ್ದು, ಹುಡುಕಾಟ ನಡೆಸಿದರು. ಸ್ಥಳೀಯ ರಿಕ್ಷಾ ಚಾಲಕರು ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಧಾವಿಸಿ ಬಂದ ಈಶ್ವರ್ ಮತ್ತು ತಂಡದವರು ಹುಡುಕಾಟ ನಡೆಸಿ ಇಬ್ಬರನ್ನೂ ದಡಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದರು. ಮಾನ್ಯ ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಯಶಸ್ವಿನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಪತ್ತೆ ಪ್ರಕರಣ
ದಾಖಲಾಗಿತ್ತು
ಗುರುವಾರ (ಆ. 3) ಬೆಳಗ್ಗೆ ಕಾಲೇಜಿಗೆ ತೆರಳಿದ್ದ ಈ ಬಾಲಕಿಯರು ಸಂಜೆ ಎಂದಿನಂತೆ ಮನೆಗೆ ಮರಳಿರಲಿಲ್ಲ. ದಿನನಿತ್ಯ ಬರುವ ಬಸ್ಸಿನಲ್ಲಿ ಬಾರದಿದ್ದಾಗ ನಾಪತ್ತೆಯಾಗಿರುವ ಬಗ್ಗೆ ಕೊಡಗು ಮಹಿಳಾ ಠಾಣೆಗೆ ದೂರು ನೀಡಿದ್ದೆವು ಎಂದು ಯಶಸ್ವಿನಿ ಮನೆಯವರು ತಿಳಿಸಿದ್ದಾರೆ. ಇಬ್ಬರೂ ಅಪ್ರಾಪ್ತ ವಯಸ್ಕರಾಗಿರುವುದರಿಂದ ಅಪಹರಣ ಎಂದು ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮನೋರಂಜನೆಗಿರುವ
ವ್ಯವಸ್ಥೆ ಜೀವರಕ್ಷಣೆಗಿಲ್ಲ!
ಮಳೆಗಾಲ ಮತ್ತು ಪ್ರತಿಕೂಲ ಹವಮಾನ ಇರುವುದರಿಂದಾಗಿ ಶನಿವಾರ ಸಮುದ್ರ ಪ್ರಕ್ಷುಬ್ಧವಾಗಿತ್ತು. ಇವರಿಬ್ಬರು ಬೀಚ್‌ನ ಉತ್ತರ ಭಾಗದಲ್ಲಿ ಬೆಳಕು ಇಲ್ಲದ ಕಡೆ ನೀರಿಗೆ ಇಳಿದಿದ್ದರು. ಮಲ್ಪೆಯಲ್ಲಿ ಪ್ರವಾಸಿಗರ ಮನೋರಂಜನೆಗೆ ಬೋಟಿಂಗ್ ವ್ಯವಸ್ಥೆ ಇದೆ. ಆದರೆ ಅವರು ಅಪಾಯಕ್ಕೆ ಸಿಲುಕಿದಾಗ ಜೀವ ರಕ್ಷಿಸಲು ರಕ್ಷಣ ಬೋಟುಗಳಿಲ್ಲದಿರುವುದು ವಿಪರ್ಯಾಸ ಎಂದು ಜೀವರಕ್ಷಕರಾದ ಈಶ್ವರ್ ಮಲ್ಪೆ ಬೇಸರ ವ್ಯಕ್ತಪಡಿಸಿದ್ದಾರೆ.