ಮಲ್ಪೆ: ತೆಂಕನಿಡಿಯೂರು ಬೆಳ್ಕಳೆ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೇವಸ್ಥಾನ ಮೂಕಾಂಬಿಕ ಅಮ್ಮನವರ ಸನ್ನಿಧಿಯಲ್ಲಿ ಸೆ. 6ರಂದು ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಕಳ್ಳತನದ ಬಗ್ಗೆ ಆಡಳಿತ ಮಂಡಳಿ ಅದೇ ದಿನ ಮಲ್ಪೆ ಪೊಲೀಸ್ ಠಾಣೆಗೆ ದೂರನ್ನು ನೀಡಿತ್ತು. ಆಡಳಿತ ಮಂಡಳಿ, ಹತ್ತು ಸಮಸ್ತರು ಮಾರನೇ ದಿನ ಮತ್ತು ನವರಾತ್ರಿ ಉತ್ಸವದ ಸಂದರ್ಭ ಬಬ್ಬು ಸ್ವಾಮಿಯ ದರ್ಶನ ಸೇವೆಯನ್ನು ಮಾಡಿಸಿ ಕಳವಾದ ಬಗ್ಗೆ ದೂರು ನೀಡಿದ್ದರು.
ದೈವವು ನೇಮೋತ್ಸವದ ಒಳಗಡೆಯಾಗಿ ಕಾಣಿಕೆ ಡಬ್ಬಿಯನ್ನು ಕದ್ದ ವ್ಯಕ್ತಿಯನ್ನು ದೈವಸ್ಥಾನದ ಎದುರಲ್ಲಿ ನಿಲ್ಲಿಸುವುದಾಗಿ ಅಭಯ ನೀಡಿತ್ತು.
ಡಿ. 28ರಂದು ಮಲ್ಪೆ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮಾನಿ, ಪಿಎಸ್‌ಐ ಸುಷ್ಮಾ ಹಾಗೂ ರವಿ ಜಾಧವ್ ಆರೋಪಿ ಹರ್ಷಿತ್‌ನನ್ನು ಬೈಂದೂರಿನಲ್ಲಿ ಬಂಧಿಸಿ ದೈವಸ್ಥಾನಕ್ಕೆ ಕರೆತಂದಿದ್ದರು.
ಈತ ಜಿಲ್ಲೆಯಲ್ಲಿ ಹಲವಾರು ದೇವಸ್ಥಾನಗಳಲ್ಲಿ ಕಳ್ಳತನ ಎಸಗಿದ್ದಾನೆಂದು ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿರಿಯಡ್ಕ ಜೈಲಿನಲ್ಲಿರಿಸಲಾಗಿದೆ. ದೈವದ ಅಭಯದ ನುಡಿ ಸತ್ಯವಾಗಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.