Advertisement

ನಾಪತ್ತೆಯಾದ ಮಲ್ಪೆ ಬೋಟ್‌ ಇನ್ನೂ ನಿಗೂಢ!

03:54 AM Jan 01, 2019 | |

ಮಲ್ಪೆ: ಏಳು ಮಂದಿ ಮೀನುಗಾರರನ್ನು ಹೊತ್ತು ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಆಳಸಮುದ್ರ ಬೋಟ್‌ ನಾಪತ್ತೆಯಾಗಿ 16 ದಿನಗಳು ಸಂದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಮೀನುಗಾರರ ಕುಟುಂಬಗಳ ನೋವು ಅರಣ್ಯ ರೋದನವಾಗಿದೆ.

Advertisement

ಪೂಜೆ ಮಾಡಿ ಹೊರಟಿದ್ದರು
ಬೋಟಿನ ಸಣ್ಣಪುಟ್ಟ ದುರಸ್ತಿ, ಪೈಂಟ್‌ ಕೆಲಸ ಮುಗಿದ ಬಳಿಕ ಡಿ. 13ರಂದು ಗಣಪತಿ ಹೋಮ, ಪೂಜೆ ನಡೆಸಿ ರಾತ್ರಿ 11 ಗಂಟೆಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಡಿ. 15ರ ತಡರಾತ್ರಿ 1 ಗಂಟೆ ವರೆಗೆ ವಾಸುದೇವ ಬೋಟ್‌ನ ಮೀನುಗಾರರ ಜತೆ  ವಯರ್‌ಲೆಸ್‌ ಸಂಪರ್ಕದಲ್ಲಿದ್ದರು. ಬಳಿಕ ಎಲ್ಲರ ಮೊಬೈಲ್‌ ಮತ್ತು ವಯರ್‌ಲೆಸ್‌ ಸಂಪರ್ಕ ಕಡಿದುಕೊಂಡಿತ್ತು. ಮೊಬೈಲ್‌ಗ‌ಳು ಸ್ವಿಚ್‌ ಆಫ್‌ ಆಗಿದೆ ಎಂದು ತಿಳಿದು ಬಂದಿದೆ.

ಯಕ್ಷ ಪ್ರಶ್ನೆ
ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಬೋಟ್‌ ನಾಪತ್ತೆ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ. ಈ ಹಿಂದೆ ಗೋವಾ, ಮಹಾರಾಷ್ಟ್ರಕ್ಕೆ ತೆರಳಿದ ಸಂದರ್ಭ ಅಲ್ಲಿ ಮೀನು ಲೂಟಿಕೋರರಿಂದ ಹಲ್ಲೆಗೊಳಾಗಿದ್ದು ಮತ್ತು ಅಲ್ಲಿನ ಪೊಲೀಸರು ಬೋಟ್‌ ವಶಪಡಿಸಿಕೊಂಡ ಪ್ರಕರಣ ಹಲವು ಬಾರಿ ನಡೆದಿತ್ತು. ಅಗ ಮೊಬೈಲ್‌ ಮೂಲಕ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು, ಮೀನುಗಾರರು ಗೋವಾ, ಮಹಾರಾಷ್ಟ್ರದ ಗಡಿ, ದೂರದ ಗುಜರಾತ್‌ ವರೆಗೂ ನಿರಂತರ ಹುಡುಕಾಡುತ್ತಿದ್ದರೂ ಸಣ್ಣ ಸುಳಿವೂ ಸಿಕ್ಕಿಲ್ಲ.

ನೌಕಾಪಡೆ, ವಾಯುಪಡೆಗೆ ಸೂಕ್ತ ನಿರ್ದೇಶ ನೀಡಿ ಮೀನುಗಾರರ ಪತ್ತೆಗೆ ತತ್‌ಕ್ಷಣ ಸಹಕರಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್‌ ಆವರು ಕೇಂದ್ರ ಸರಕಾರದ ರಕ್ಷಣಾ ಕಾರ್ಯದರ್ಶಿ ಸಂಜಯ ಮಿಶ್ರ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

20 ಬೋಟ್‌ ಪರಿಸರದಲ್ಲಿದ್ದರೂ…
ಸುವರ್ಣ ತ್ರಿಭುಜ ಟ್ರಾಲ್‌ಬೋಟ್‌ನ ಮಾಲಕ ಚಂದ್ರಶೇಖರ್‌ ಕೋಟ್ಯಾನ್‌ ಸಹಿತ 7 ಮಂದಿ ನಾಪತ್ತೆಯಾದ ಬೋಟ್‌ನಲ್ಲಿದ್ದರು. ಈ ಬೋಟ್‌ ಇತರ 20 ಬೋಟುಗಳೊಂದಿಗೆ ಮೀನುಗಾರಿಕೆಗೆ ತೆರಳಿದ್ದು, 500-600 ಮೀ. ಅಂತರದಲ್ಲಿ ಇತರ ಬೋಟ್‌ಗಳಿದ್ದವು.

Advertisement

ನಾಪತ್ತೆಯಾದವರು 
ಚಂದ್ರಶೇಖರ ಕೋಟ್ಯಾನ್‌, ದಾಮೋದರ ಪಾವಂಜಿಗುಡ್ಡೆಯವರು. ಕುಮಟಾದ ಲಕ್ಷ್ಮಣ ಮತ್ತು ಸತೀಶ್‌, ಭಟ್ಕಳದ ಹರೀಶ್‌ ಮತ್ತು ರಮೇಶ್‌ ಹಾಗೂ ಹೊನ್ನಾವರ ಮಂಕಿಯ ರವಿ ಮನೆಗಳಲ್ಲೂ ಸೂತಕದ ಛಾಯೆ. ಅದೇ ಬೋಟಿನಲ್ಲಿ ದುಡಿಯುತ್ತಿದ್ದ ಭಟ್ಕಳದ ಜೋಗಯ್ಯ ರಜೆಯಲ್ಲಿದ್ದು, ತೆರಳಿರಲಿಲ್ಲ. 

ಪತ್ತೆಗೆ ಮೂರು ದಿನಗಳ ಗಡು
ಉಡುಪಿ:
ನಾಪತ್ತೆಯಾಗಿರುವ 7 ಮಂದಿ ಮೀನುಗಾರರು ಮತ್ತು ದೋಣಿಯನ್ನು ಮೂರು ದಿನದೊಳಗೆ ಪತ್ತೆಹಚ್ಚದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಲ್ಪೆ ಮೀನುಗಾರರ ಸಂಘ ಎಚ್ಚರಿಕೆ ನೀಡಿದೆ.
ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಮೀನುಗಾರರು, ಕೋಸ್ಟ್‌ಗಾರ್ಡ್‌, ನೌಕಾದಳದವರು ಶೋಧ ನಡೆಸಿದ್ದಾರೆ. ಆದರೂ ಪತ್ತೆಯಾಗಿಲ್ಲ. ಸ್ಥಳೀಯ ಶಾಸಕರು ಕೇಂದ್ರ ಸಚಿವ ಸದಾನಂದ ಗೌಡ ಅವರ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಕೂಡ ಪ್ರಧಾನಿ ಜತೆ ಮಾತುಕತೆ ನಡೆಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ಇಲಾಖೆಗಳ ಮೂಲಕ ಎಲ್ಲ ವಿಧಾನಗಳಲ್ಲಿಯೂ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು. ಮುಂದಿನ ಹೋರಾಟದ ಕುರಿತು ಚರ್ಚಿಸಲು ಜ. 2ರಂದು ಮಲ್ಪೆಯಲ್ಲಿ ಸಭೆ ನಡೆಯಲಿದೆ. ಅಂದು ಕರಾವಳಿಯಾದ್ಯಂತ ಮೀನುಗಾರಿಕೆಯನ್ನು ಸಂರ್ಪೂಣ ಸ್ಥಗಿತಗೊಳಿಸಿ ಹೋರಾಟದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಗಂಭೀರವಾಗಿ ಪರಿಗಣಿಸಿಲ್ಲವೇಕೆ?
ಬೇರೆ ದುರ್ಘ‌ಟನೆಗಳ ಸಂದರ್ಭ ಸರಕಾರ ವಿಶೇಷ ಗಮನ ಹರಿಸುತ್ತದೆ. ಆದರೆ ಮೀನುಗಾರರು ನಾಪತ್ತೆಯಾಗಿ 16 ದಿನಗಳು ಕಳೆದರೂ ಗಂಭೀರವಾಗಿ ಪರಿಗಣಿಸಿಲ್ಲ. ಅವರ ಕುಟುಂಬಿಕರು ಕಂಗಾಲಾಗಿದ್ದು ಅವರಿಗೆ ಉತ್ತರಿಸುವ ಸ್ಥಿತಿಯಲ್ಲಿ ನಾವಿಲ್ಲ. ನಾಪತ್ತೆಯಾದವರ ಕುರಿತು ಸರಿಯಾದ ಮಾಹಿತಿ ದೊರೆಯದೆ ನಾವು ಕೂಡ ಮೀನುಗಾರಿಕೆಗೆ ತೆರಳುತ್ತಿಲ್ಲ ಎಂದು ಇತರ ಮೀನುಗಾರರು ಹೇಳುತ್ತಿದ್ದಾರೆ ಎಂದು ಮೀನುಗಾರ ಮುಖಂಡರು ಹೇಳಿದರು.

ಮಿಸ್ಡ್ ಕಾಲ್‌ ಸಂದೇಶ
ಡಿ. 15ರ ರಾತ್ರಿ 1 ಗಂಟೆಗೆ ಮೀನುಗಾರರು ಸಂಪರ್ಕ ಕಡಿದುಕೊಂಡಿದ್ದಾರೆ. ಆದರೆ ಡಿ. 16ರ ಮಧ್ಯರಾತ್ರಿ 1 ಗಂಟೆಗೆ ವೇಳೆಗೆ ಆ ಪೈಕಿ ಓರ್ವ ಮೀನುಗಾರರ ಮೊಬೈಲ್‌ಗೆ ಮಿಸ್ಡ್ಕಾಲ್‌ನ ಸಂದೇಶ ರವಾನೆಯಾಗಿರುವುದು ಮಹಾರಾಷ್ಟ್ರ ಸಿಂಧು ದುರ್ಗಾವ್ಯಾಪ್ತಿಯಲ್ಲಿರುವ ಮೊಬೈಲ್‌ ಟವರ್‌ ಒಂದರಲ್ಲಿ ದಾಖಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಹಾಗಾಗಿ ಈ ಘಟನೆಯ ಬಗ್ಗೆ ಭಾರೀ ಸಂದೇಹಗಳು ವ್ಯಕ್ತವಾಗಿವೆ. ಭಯೋತ್ಪಾದಕರು, ಕಡಲುಗಳ್ಳರು ಅಥವಾ ಡ್ರಗ್ಸ್‌ ಮಾಫಿಯಾದವರು ಬೋಟ್‌ ಅಪಹರಿಸಿರಬಹುದೇ ಎಂಬ ಶಂಕೆಗಳೂ ಇವೆ ಎಂದು ಸತೀಶ್‌ ಕುಂದರ್‌ ಹೇಳಿದರು.
ಪ್ರಧಾನ ಕಾರ್ಯದರ್ಶಿ ಗೋಪಾಲ್‌ ಆರ್‌.ಕೆ., ಉಪಾಧ್ಯಕ್ಷ ನಾಗರಾಜ್‌ ಸುವರ್ಣ, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌ ಸುವರ್ಣ, ಯಾಂತ್ರಿಕ ಟ್ರಾಲ್‌ಬೋಟ್‌ ಸೊಸೈಟಿಯ ಮಾಜಿ ಅಧ್ಯಕ್ಷರಾದ ಗುಂಡು ಬಿ. ಅಮೀನ್‌, ರಾಮಚಂದ್ರ ಕುಂದರ್‌, ಇತರ ಪದಾಧಿಕಾರಿಗಳು, ನಾಪತ್ತೆಯಾದ ಮೀನುಗಾರರ ಸಂಬಂಧಿಕರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next