Advertisement

Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ

03:50 PM Nov 08, 2024 | Team Udayavani |

ಮಲ್ಪೆ: ಕೋಡಿಬೆಂಗ್ರೆ ಹಂಗಾರಕಟ್ಟೆ ಸಂಪರ್ಕ ಕಲ್ಪಿಸಿ ಕೊಡುತ್ತಿದ್ದ ಬಾರ್ಜ್‌ ಸೇವೆ ಇದೀಗ ಗುತ್ತಿಗೆ ವಹಿಸಿದ್ದ ಸಂಸ್ಥೆಯ ಟೆಂಡರ್‌ ಅವಧಿ ಮುಗಿದ ಕಾರಣ ಸ್ಥಗಿತಗೊಂಡಿದ್ದು ಇದೀಗ ಇಲ್ಲಿನ ನಿವಾಸಿಗಳು ಘನ ವಾಹನಗಳಲ್ಲಿ ಸಂಚರಿಸಬೇಕಾದರೆ 25-30 ಕಿ. ಮೀ. ಸುತ್ತು ಬಳಸಿಕೊಂಡು ಹೋಗಬೇಕಾದ ಪರಿಸ್ಥಿತಿ ಇದ್ದು ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಹಾಗಾಗಿ ಸ್ಥಳೀಯರು ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ವರ್ಷದ ಹಿಂದೆ ಬಾರ್ಜ್‌ ಸೇವೆಯನ್ನು ಸರಕಾರವು ಮೀನು ಮಾರಾಟ ಫೆಡರೇಶನ್‌ಗೆ ಟೆಂಡರ್‌ ಮೂಲಕ ನೀಡಿರುತ್ತಾರೆ. ಈಗ ಟೆಂಡರ್‌ ಅವಧಿ ಮುಗಿದ ಕಾರಣ ಬಾರ್ಜ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಕೋಡಿಬೆಂಗ್ರೆ ಊರಿನ ಸುಮಾರು 250 ಮನೆಗಳಿಗೆ ಸಂಕಷ್ಟ ಎದುರಾಗಿದೆ.

ಅಲ್ಲದೆ ಈ ಊರಿನ ನಾಗರಿಕರು ಪಡಿತರ ಚೀಟಿ, ಪಂಚಾಯತ್‌ ಕಚೇರಿ, ನಾಡ ಕಚೇರಿಗೆ, ಶಾಸಕರ ಕಚೇರಿಗೆ ಹಿರಿಯ ನಾಗರಿಕರನ್ನು ಕರೆದುಕೊಂಡು ಹೋಗಬೇಕಾದರೆ ಸುಮಾರು 2 ಸಾವಿರ ರೂ. ಖರ್ಚಾಗುತ್ತದೆ. ಒಂದೇ ದಿನದಲ್ಲಿ ಕೆಲಸ ಆಗದಿದ್ದರೆ 4-5 ದಿನಗಳವರೆಗೆ ಹೋಗಿ ಬರಲು ತುಂಬಾ ಹಣದ ಆವಶ್ಯಕತೆ ಇರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಭಾಗದ ಅದ್ಬುತ ಪ್ರಕೃತಿ ಸೌಂದರ್ಯವನ್ನು ಸವಿಯಲು ವಾರಾಂತ್ಯ ಹಾಗೂ ಇನ್ನಿತರ ದಿನಗಳಲ್ಲಿ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಮೂರು ನದಿಗಳ ಸಂಗಮ ಸ್ಥಾನ, ಡೆಲ್ಟಾ ಬೀಚ್‌, ಬೋಟ್‌ ಹೌಸ್‌, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.

ಬಾರ್ಜ್‌ ಸೇವೆ ಮುಂದುವರಿಸಲು ಜಿಲ್ಲಾಧಿಕಾರಿಗೆ ಮನವಿ
ಇಲ್ಲಿನ ಜನರ ಮತ್ತು ಊರಿನ ಹಿತ ದೃಷ್ಟಿಯಿಂದ ಇಲ್ಲಿನ ಬಾರ್ಜ್‌ ಸೇವೆಯನ್ನು ಖಾಸಗಿಯವರಿಗೆ ಇಲ್ಲವೇ ಸರಕಾರದಿಂದಲೇ ಮುಂದುವರಿಸಬೇಕು ಎಂದು ಕೋಡಿಬೆಂಗ್ರೆಯ ನಾಗರಿಕರು ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ನಿಯೋಗದಲ್ಲಿ ಗ್ರಾ.ಪಂ. ಸದಸ್ಯರಾದ ವಿನಯ್‌ ಅಮೀನ್‌, ಪ್ರಸಾದ್‌ ತಿಂಗಳಾಯ, ಕುಸುಮಾ ಖಾರ್ವಿ, ಊರಿನ ಪ್ರಮುಖರಾದ ಮನೋಹರ್‌ ಕುಂದರ್‌, ನಾಗರಾಜ್‌ ಬಿ. ಕುಂದರ್‌, ವಿಶು ಶ್ರೀಯಾನ್‌, ವಿವೇಕ್‌ ಪುತ್ರನ್‌, ರಾಘು ತೋಳಾರ್‌ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next