Advertisement

Malpe fishing port: ಮೇಲ್ದರ್ಜೆ ಯೋಜನೆಗೆ ಸರ್ವೇ ಆರಂಭ

01:16 AM Aug 09, 2024 | Team Udayavani |

ಉಡುಪಿ: ಮಲ್ಪೆಯ ಸರ್ವಋತು ಮೀನುಗಾರಿಕೆ ಬಂದರನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ಆರಂಭಿಕ ಹಂತವಾಗಿ ಸರ್ವೇ ಕಾರ್ಯ ಆರಂಭಗೊಂಡಿದ್ದು, ಅಕ್ಟೋಬರ್‌ ತಿಂಗಳ ಒಳಗೆ ಮುಗಿಸಲು ಉದ್ದೇಶಿಸಲಾಗಿದೆ.

Advertisement

ಈಗಾಗಲೇ ಡ್ರೋನ್‌ ಸರ್ವೇ ಪೂರ್ಣ ಗೊಂಡಿದ್ದು, 2ಡಿ ಹಾಗೂ 3ಡಿ ಮ್ಯಾಪಿಂಗ್‌ ಕಾರ್ಯ ನಡೆದಿದೆ.

ವಾರ್ಷಿಕವಾಗಿ ನೂರಾರು ಕೋ.ರೂ. ವಹಿವಾಟು ನಡೆಯುವ ಈ ಬಂದರಿನಿಂದ ಸರಕಾರಕ್ಕೂ ಕೋಟ್ಯಂತರ ರೂ. ಆದಾಯ ಬರುತ್ತಿದೆ. ನಾನಾ ಮಾದರಿಯ 20ರಿಂದ 25 ಸಾವಿರ ಬೋಟುಗಳು ದಿನನಿತ್ಯ ಮೀನುಗಾರಿಕೆ ನಡೆಸುತ್ತಿವೆ.

ಕರಾವಳಿ ಕಾವಲು ಪೊಲೀಸ್‌ ಪಡೆ, ಮೀನುಗಾರರು, ಬಂದರಿನ ಎಂಜಿನಿಯರಿಂಗ್‌ ವಿಭಾಗ, ಅಗ್ನಿಶಾಮಕ ದಳ, ಎಂಐಟಿಯ ಎಂಜಿನಿಯರಿಂಗ್‌ ವಿಭಾಗ, ಮಾಹೆಯ ವಾಸ್ತುಶಿಲ್ಪ ಮತ್ತು ಯೋಜನೆ, ನಿಟ್ಟೆ ಎಂಜಿನಿಯರಿಂಗ್‌ ಕಾಲೇಜು, ಬಂಟಕಲ್‌ನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ತಂಡ, ಉಡುಪಿ ಜಿಲ್ಲಾ ಸಿವಿಲ್‌ ಎಂಜಿನಿಯರ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಶನ್‌, ಉಡುಪಿಯ ತಜ್ಞ ಎಂಜಿನಿಯರ್‌ಗಳು ಸೇರಿ ಸರ್ವೇ ಕಾರ್ಯ ನಡೆಸಿ ಮಾಸ್ಟರ್‌ ಪ್ಲಾನಿಂಗ್‌ ಮಾಡುತ್ತಿದ್ದಾರೆ.

ಸರ್ವೇ ವಿಷಯಗಳು
ಬಂದರಿನ ಭದ್ರತೆ, ನೈರ್ಮಲ್ಯ, ಟ್ರಾಫಿಕ್‌ ವ್ಯವಸ್ಥೆ, ತಾಂತ್ರಿಕತೆ ವಿಚಾರ, ವ್ಯವಹಾರ, ಮಲ್ಟಿ ಲೆವೆಲ್‌ ಪಾರ್ಕಿಂಗ್‌, ಎಟಿಎಂ, ಸ್ಮೋಕಿಂಗ್‌ ಝೋನ್‌, ಆರೋಗ್ಯ ಕೇಂದ್ರ, ಕಾರ್ಮಿಕರ ವಿವರ ಕ್ರೋಡೀಕರಣಕ್ಕೆ ಬಯೋಮೆಟ್ರಿಕ್‌ ವ್ಯವಸ್ಥೆ, ಬೋಟ್‌ಗಳಿಗೆ ಟ್ಯಾಗ್‌ ಅಳವಡಿಕೆ ಪ್ರಕ್ರಿಯೆ ಸಹಿತ ಮುಂದಿನ 100ರಿಂದ 150 ವರ್ಷಗಳ ಹಿತದೃಷ್ಟಿಯನ್ನಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಮುಖ್ಯವಾಗಿ ಬಂದರಿನ ಆಗಮನ, ನಿರ್ಗಮನ ವ್ಯಾಪ್ತಿ, ವಿವಿಧ ಬೋಟ್‌ಗಳು, ರಕ್ಷಣ ಪರಿಕರಗಳ ನಿಲುಗಡೆ ಸಹಿತ ಸ್ಥಳೀಯ ಮೀನುಗಾರರಿಗೆ ತೊಂದರೆ ಉಂಟಾಗದಂತೆ ಮಾಸ್ಟರ್‌ ಪ್ಲ್ರಾನ್‌ ರೂಪಿಸಲಾಗುತ್ತಿದೆ.

Advertisement

ಹೇಗಿದೆ ಯೋಜನೆ?
ಪ್ರಸ್ತುತ ಮಲ್ಪೆ ಬಂದರಿನಲ್ಲಿ ಅದರ ಸಾಮರ್ಥ್ಯಕ್ಕಿಂತ 3 ಪಟ್ಟು ಅಧಿಕ ಬೋಟ್‌ಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಬೆಂಕಿ ಅವಘಡಗಳು ಉಂಟಾದರೆ ನಿಯಂತ್ರಣ ಬಲುಕಷ್ಟ ಎಂಬಂತಾಗಿದೆ. ಮಲ್ಪೆ ಮೀನುಗಾರರ ಸಂಘದ ಪ್ರಕಾರ ಹೊರ ಮೀನುಗಾರಿಕೆ ಬಂದರು ಬೇಡಿಕೆಯಿದ್ದು, ಸೀ ಆ್ಯಂಬುಲೆನ್ಸ್‌ಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ನೂತನ ಯೋಜನೆಯಲ್ಲಿ ಫ್ಲೋಟಿಂಗ್‌ ಫೈಯರ್‌ ಸರ್ವಿಸ್‌, ಸೀ ಆ್ಯಂಬುಲೆನ್ಸ್‌, ಸ್ಲಿಪ್‌ ವೇ ಬೇಡಿಕೆ ಜತೆಗೆ ಪರ್ಸಿನ್‌, ಟ್ರೋಲ್‌, ನಾಡದೋಣಿಗಳಿಗೆ ಪ್ರತ್ಯೇಕ ತಂಗುದಾಣ ನಿರ್ಮಾಣಕ್ಕೂ ಉದ್ದೇಶಿಸಲಾಗಿದೆ.

ಆಧುನಿಕ ತಂತ್ರಜ್ಞಾನ
ಅಕ್ಟೋಬರ್‌ ತಿಂಗಳೊಳಗೆ ಈ ಯೋಜನೆಯನ್ನು ಕರಾವಳಿ ಪಡೆಗೆ ಸಲ್ಲಿಸಲಾಗುತ್ತದೆ. ಅನಂತರ ಉಳಿದ ಪ್ರಕ್ರಿಯೆಗಳು ನಡೆದು 10 ವರ್ಷಗಳೊಳಗೆ ಈ ಯೋಜನೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆಯವರು ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿವಿಧ ರೀತಿಯ ಯೋಜನೆಗಳನ್ನು ವಿದ್ಯಾರ್ಥಿಗಳು ಹಾಗೂ ನುರಿತ ತಂಡದವರು ಕೈಗೊಂಡಿದ್ದಾರೆ. ಮಲ್ಪೆ ಮೀನುಗಾರಿಕೆ ಬಂದರು 114 ಎಕ್ರೆ ವ್ಯಾಪ್ತಿಯಲ್ಲಿದ್ದು, ಹೆಚ್ಚುವರಿ ಸ್ಥಳಾವಕಾಶದ ನಿಮಿತ್ತ 1,200 ಎಕ್ರೆ ಜಾಗ, ಐಲ್ಯಾಂಡ್‌ಗಳನ್ನು ಸರ್ವೇ ನಡೆಸಲಾಗಿದೆ.

ಸರ್ವೇ ಕಾರ್ಯ ಈಗಾಗಲೇ ಆರಂಭಿಕ ಹಂತದಲ್ಲಿದೆ. ಒಂದು ಬಾರಿ ಸರ್ವೇ ಕಾರ್ಯ ಪೂರ್ಣಗೊಂಡ ಅನಂತರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಇದರ ಖರ್ಚುವೆಚ್ಚಗಳ ವಿವರಗಳನ್ನೊಳಗೊಂಡ ಮಾಹಿತಿಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗುವುದು.
– ಮಿಥುನ್‌ ಎಚ್‌.ಎನ್‌., ವರಿಷ್ಠಾಧಿಕಾರಿ, ಕರಾವಳಿ ಕಾವಲು ಪಡೆ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next