Advertisement

ಮಳೆ-ಗಾಳಿಗೆ ಸಮುದ್ರ ಪ್ರಕ್ಷುಬ್ಧ : ಬಂದರಿನಲ್ಲಿ ಲಂಗರು ಹಾಕಿದ ಮೀನುಗಾರಿಕೆ ದೋಣಿಗಳು

11:05 AM Sep 12, 2022 | Team Udayavani |

ಮಲ್ಪೆ : ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆ ಯಿಂದಾಗಿ ಸಮುದ್ರವು ಪ್ರಕ್ಷುಬ್ಧಗೊಂಡಿದೆ. ಇದರ ಪರಿಣಾಮವಾಗಿ ಬೋಟ್‌ಗಳು ಮೀನು ಗಾರಿಕೆ ಯನ್ನು ನಡೆಸಲಾಗದೆ ದಡದತ್ತ ಬಂದಿವೆ. ಮೀನುಗಾರಿಕೆ ಮುಗಿಸಿ ಬಂದಿರುವ ಬೋಟುಗಳು ಮತ್ತೆ ಮೀನುಗಾರಿಕೆಗೆ ತೆರಳಿಲ್ಲ.

Advertisement

ತಿಂಗಳ ಹಿಂದೆಯಷ್ಟೆ ಮೀನುಗಾರಿಕೆಯ ಋತು ಆರಂಭವಾಗಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿ ಮೀನುಗಾರರಿದ್ದರು; ಉತ್ತಮವಾಗಿ ಮೀನುಗಾರಿಕೆ ನಡೆಯುತ್ತಿತ್ತು. ಆದರೆ ಮತ್ತೆ ಪ್ರಾಕೃತಿಕ ವೈಪರೀತ್ಯ ಉಂಟಾಗಿದೆ. ಕೊಂಚ ಆದಾಯ ಗಳಿಸುವಷ್ಟರಲ್ಲೇ ಪ್ರಕ್ಷುಬ್ಧ ವಾತಾವರಣದಿಂದಾಗಿ ಮೀನುಗಾರಿಕೆ ನಡೆಸದಂತಾಗಿದೆ. ಇದ ರಿಂದಾಗಿ ನಿತ್ಯ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಹೊಡೆತ ಉಂಟಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಸಮುದ್ರದಲ್ಲಿ ಗಾಳಿಯಿಂದಾಗಿ ನೀರಿನ ಒತ್ತಡವೂ ಹೆಚ್ಚಾಗಿದೆ. ಮಲ್ಪೆ ಬಂದರಿನಲ್ಲಿ ಶೇ. 70ರಷ್ಟು ಬೋಟ್‌ಗಳು ಲಂಗರು ಹಾಕಿವೆ. ಬಹುತೇಕ ಬೋಟುಗಳು ಕಾರವಾರ ಬಂದರು ಸೇರಿದಂತೆ ಸಮೀಪ‌ದ ಬಂದರನ್ನು ಆಶ್ರಯಿಸಿವೆ. ನೀರಿನ ಒತ್ತಡ ಜಾಸ್ತಿ ಇರುವುದರಿಂದ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರ ಕಾರ್ಮಿಕರು ತಿಳಿಸುತ್ತಾರೆ.

ದಿನಾ ಅರ್ಧದಲ್ಲೇ ವಾಪಸ್‌
ಮಂಗಳೂರು ಬಂದರು ವ್ಯಾಪ್ತಿಯಲ್ಲಿ ಸೆ. 3ರಿಂದ ಸರಿಯಾಗಿ ಮೀನುಗಾರಿಕೆ ಮಾಡ ಲಾಗುತ್ತಿಲ್ಲ. ಬೆಳಗ್ಗೆ ಮೀನುಗಾರಿಕೆಗೆ ತೆರಳಿದ ಪಸೀìನ್‌ ಬೋಟುಗಳು ತೂಫಾನ್‌ ಆರಂಭ ವಾಯಿತೆಂದು ಅರ್ಧದಲ್ಲೇ ವಾಪ ಸಾಗುತ್ತಿವೆ. ಇದುವರೆಗೂ ಹವಾಮಾನ ಸರಿಯಾಗದೆ ನಷ್ಟವನ್ನು ಎದುರಿಸುತ್ತಿದ್ದೇವೆ. ಈಗಾಗಲೇ ಮೀನು ಗಾರಿಕೆಗೆ ತೆರಳಿದ ಟ್ರಾಲ್‌ಬೋಟುಗಳು ಸಮೀಪದ ಬಂದರಿನಲ್ಲಿ ಲಂಗರು ಹಾಕಿವೆ ಎಂದು ಪಸೀìನ್‌ ಮತ್ತು ಟ್ರಾಲ್‌ಬೋಟು ಸಂಘದ ನಿತಿನ್‌ ಕುಮಾರ್‌ ಮಂಗಳೂರು ತಿಳಿಸಿದ್ದಾರೆ.

ಪ್ರವಾಸಿಗರಿಗೆ ಮುಂದುವರಿದ ನಿರ್ಬಂಧ
ಮಳೆ ಕೊಂಚ ಕಡಿಮೆಯಾಗಿದೆ ಎನ್ನುವಷ್ಟರಲ್ಲೇ ಮತ್ತೆ ರಾಜ್ಯದಲ್ಲಿ ಗಾಳಿಮಳೆ ಆರಂಭವಾಗಿದ್ದು, ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಆದ್ದರಿಂದ ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯು ಬೀಚ್‌ಗೆ ಬರುವ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಮತ್ತಷ್ಟು ಎಚ್ಚರ ವಹಿಸಿದೆ.

Advertisement

ಸಾಮಾನ್ಯವಾಗಿ ಜಿಲ್ಲಾಡಳಿತ ಮೇ 15ರಿಂದ ಸೆ. 15ರ ವರೆಗೆ ಬೀಚ್‌ನಲ್ಲಿ ಯಾವುದೇ ವಾಟರ್‌ ನ್ಪೋರ್ಟ್ಸ್ ನಡೆಸದಂತೆ ನಿರ್ಬಂಧ ಹೇರುತ್ತದೆ. ಮಳೆಗಾಲದಲ್ಲಿ ಕಡಲ ಅಬ್ಬರದ ಹಿನ್ನೆಲೆಯಲ್ಲಿ ಯಾರೂ ನೀರಿಗೆ ಇಳಿಯದಂತೆ ಬೀಚ್‌ನ 1 ಕಿ.ಮೀ. ಉದ್ದಕ್ಕೆ ಫಿಶಿಂಗ್‌ ನೆಟ್‌, ರಿಫ್ಲೆಕ್ಟಡ್‌ ಪಟ್ಟಿಯ ತಡೆಗೋಡೆ ಹಾಗೂ ಕೆಂಪು ಬಾವುಟವನ್ನು ಅಳವಡಿಸಿ ಕ್ರಮ ಕೈಗೊಂಡಿದೆ. ಪ್ರವಾಸಿಗರು ದೂರದಿಂದಲೇ ಸಮುದ್ರವನ್ನು ವೀಕ್ಷಿಸಲು ಅವಕಾಶವಿದೆ.

ಈ ಬಾರಿ ಮಳೆಗಾಲದಲ್ಲೂ ವಾರಾಂತ್ಯದಲ್ಲಿ ಬೀಚ್‌ಗೆ ಬರುವವರ ಸಂಖ್ಯೆ ಹೆಚ್ಚೇ ಇತ್ತು. ಸೆ. 10ರಂದು ಹುಣ್ಣಿಮೆಯಾಗಿರುವುದರಿಂದ ಅನಂತರದ ಕೆಲವು ದಿನಗಳಲ್ಲಿ ಸಮುದ್ರದ ನೀರಿನ ಒತ್ತಡ ಹೆಚ್ಚಾಗಿರುತ್ತದೆ. ಮಾತ್ರವಲ್ಲದೆ ಅಲ್ಲಲ್ಲಿ ಗುಂಡಿ ಬೀಳುವ ಸಾಧ್ಯತೆ ಇದೆ. ಇದು ತುಂಬಾ ಅಪಾಯಕಾರಿ. ಹಾಗಾಗಿ ಸೆ. 15ರ ಬಳಿಕ ಸಮುದ್ರದ ನೀರಿನ ಒತ್ತಡವನ್ನು ನೋಡಿಕೊಂಡು ನೀರಿಗೆ ಇಳಿಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಬೀಚ್‌ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಮಳೆಗಾಳಿಯಿಂದ ಕಡಲು ಪ್ರಕ್ಷುಬ್ಧ ಗೊಂಡಿದೆ. ಹಾಗಾಗಿ ಮಲ್ಪೆ ಬಂದರಿನಲ್ಲಿ ಮೀನು ಗಾರಿಕೆ ದೋಣಿಗಳು ಲಂಗರು ಹಾಕಿವೆ. ಸೆ. 14ರ ವರೆಗೆ ಗೋವಾ, ಮಹಾರಾಷ್ಟ್ರ, ಗುಜರಾತ್‌ ಕರಾವಳಿ  ಯಲ್ಲಿ ಜೋರಾದ ಗಾಳಿಮಳೆಯ ಲಕ್ಷಣ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
– ಗಣೇಶ್‌ ಕೆ. ಜಂಟಿ ನಿರ್ದೇಶಕರು ಮೀನುಗಾರಿಕೆ ಇಲಾಖೆ

ಇದನ್ನೂ ಓದಿ : ಭಾರಿ ಮಳೆ : ಮಾಳ ಘಾಟಿಯಲ್ಲಿ ಹೆದ್ದಾರಿ ಬದಿ ಕುಸಿತ, ಸೀತಾನದಿಯಲ್ಲಿ ಕೆಸರು ಮಿಶ್ರಿತ ನೀರು

ಗಾಳಿ ಜೋರಾಗಿ ಇರುವುದರಿಂದ ಸಮುದ್ರದಲ್ಲಿ ನೀರಿನ ಒತ್ತಡ ಜಾಸ್ತಿ ಇರುವುರಿಂದ ಸಮುದ್ರದಲ್ಲಿ ಬೋಟುಗಳನ್ನು ನಿಯಂತ್ರದಲ್ಲಿರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಹುತೇಕ ಬೋಟುಗಳು ಸಮೀಪದ ಬಂದರು ಪ್ರವೇಶಿಸಿವೆ. ಸಮುದ್ರ ತಿಳಿಯಾದ ಬಳಿಕ ಬೋಟುಗಳು ಮೀನುಗಾರಿಕೆಗೆ ತೆರಳಲಿವೆ.
– ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ಮುಳುಗುತ್ತಿದ್ದ ಇಬ್ಬರ ರಕ್ಷಣೆ
ಮಲ್ಪೆ: ಈಜಾಡಲು ಹೋಗಿ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಜೀವ ರಕ್ಷಕ ತಂಡದವರು ರಕ್ಷಿಸಿದ ಘಟನೆ ರವಿವಾರ ಸಂಜೆ 5ಗಂಟೆಗೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ಸಕಲೇಶಪುರದ ಕಾರು ಚಾಲಕರಾದ ಅವಿನಾಶ್‌ (26) ಮತ್ತು ಸಾಗರ್‌ (27) ಅವರು ಮುಖ್ಯ ಬೀಚ್‌ನಿಂದ ತುಸು ದೂರದಲ್ಲಿರುವ ಶಿವಪಂಚಾಕ್ಷರಿ ಭಜನ ಮಂದಿರದ ಎದುರು ನೀರಿಗಿಳಿದು ಈಜಾಡ ತೊಡಗಿದ್ದರು. ಅಬ್ಬರದ ಅಲೆಗಳು ಅವರಿಬ್ಬರನ್ನು ಕೊಚ್ಚಿಕೊಂಡು ಹೋದವು. ತತ್‌ಕ್ಷಣ ಬೀಚ್‌ನ ಜೀವರಕ್ಷಕರು ಧಾವಿಸಿ ಬಂದು ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿ ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಪಂಚಾಕ್ಷರಿ ಭಜನ ಮಂದಿರದ ಸಮೀಪ ಸಮುದ್ರ ತೀರದಲ್ಲಿ ನೆಟ್‌ ಅಳವಡಿಸದಿದ್ದುರಿಂದ ಆ ಭಾಗದಲ್ಲಿ ಅವರು ಜೀವರಕ್ಷಕರ ಎಚ್ಚರಿಕೆಯನ್ನು ಧಿಕ್ಕರಿಸಿ ನೀರಿಗಿಳಿದಿದ್ದರು. ಇಬ್ಬರೂ ಪಾನಮತ್ತರಾಗಿದ್ದರು ಎಂದು ಜೀವರಕ್ಷಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next