Advertisement

ಬೋಟ್‌ ಅವಶೇಷ ಪತ್ತೆ; ಮೃತದೇಹಗಳ ಮಾಹಿತಿ ಇಲ್ಲ

01:13 AM May 09, 2019 | Sriram |

ಉಡುಪಿ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟು 7 ಮಂದಿ ಮೀನುಗಾರರ ಸಹಿತ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಪತ್ತೆಯಾಗಿರುವ ಕುರಿತು ನೌಕಾಪಡೆ ಉಡುಪಿ ಎಸ್‌ಪಿಯವರಿಗೆ ಮೇ 7ರಂದು ಅಧಿಕೃತ ಮಾಹಿತಿ ನೀಡಿದೆ.

Advertisement

ಮೇ 1ರಂದು ಅವಶೇಷ ಪತ್ತೆಯಾಗಿರುವ ಬಗ್ಗೆ ನೌಕಾಪಡೆ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿತ್ತು. ಶಾಸಕ ರಘುಪತಿ ಭಟ್‌ ಕೂಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಎಸ್‌ಪಿ ನಿಶಾ ಜೇಮ್ಸ್‌ ಮೇ 3ರಂದು ಕಾರವಾರ ನೌಕಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಮೃತದೇಹ ಮಾಹಿತಿ ಇಲ್ಲ
ಎ. 30ರಿಂದ ಮೇ 2ರ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದ ಮಾಲ್ವಾಣ್‌ ಪ್ರದೇಶದ ಸಮುದ್ರ ದಡದಿಂದ 30 ಕಿ.ಮೀ. ದೂರದಲ್ಲಿ, 60 ಮೀ. ಆಳದಲ್ಲಿ ಬೋಟ್‌ನ ಅವಶೇಷ ಪತ್ತೆಯಾಗಿದೆ. ಆದರೆ ಮೃತದೇಹಗಳ ಕುರಿತು ಮಾಹಿತಿ ಸಿಕ್ಕಿಲ್ಲ.

ನಿರಂತರ ಸಂಪರ್ಕ
ಮೀನುಗಾರರ ನಾಪತ್ತೆ ಬಗ್ಗೆ ದೂರು ದಾಖಲಾಗಿದೆ. ಹಾಗಾಗಿ ಪೊಲೀಸ್‌ ಇಲಾಖೆ ಸೂಕ್ತ ಭೌತಿಕ ಸಾಕ್ಷ್ಯಾಧಾರವಿಲ್ಲದೆ 7 ವರ್ಷಗಳ ವರೆಗೆ ಈ ಪ್ರಕರಣವನ್ನು ಅಂತ್ಯಗೊಳಿಸುವಂತಿಲ್ಲ. ಆದರೆ ಪೊಲೀಸ್‌ ಇಲಾಖೆ ನೇರವಾಗಿ ಸಾಕ್ಷ್ಯಾಧಾರ ಸಂಗ್ರಹ ನಡೆಸುವುದು ಅಸಾಧ್ಯ. ನೌಕಾಪಡೆ, ಕರಾವಳಿ ಕಾವಲು ಪಡೆ ಮೊದಲಾದವುಗಳ ನೆರವು ಪಡೆಯಲಾಗುವುದು. ಮಹಾರಾಷ್ಟ್ರ ಸಿಂಧುದುರ್ಗಾ ಎಸ್‌ಪಿ ಅವರ ಜತೆಗೂ ಸಂವಹನ ನಡೆಸಲಾಗಿದೆ. ನೌಕಾಪಡೆಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತೇವೆ. ಇದೊಂದು ಅಪರೂಪದ ಪ್ರಕರಣ. ಆದಾಗ್ಯೂ ಅವಶೇಷ ದೊರಕಿರುವುದು ಮಹತ್ವದ ಬೆಳವಣಿಗೆ ಎಂದು ಎಸ್‌ಪಿ ಹೇಳಿದ್ದಾರೆ.

ಚಿತ್ರವೂ ನೌಕಾಪಡೆಯದ್ದು
ಐಎನ್‌ಎಸ್‌ ಕೊಚ್ಚಿ ಹಡಗಿನ ತಳಭಾಗಕ್ಕೆ ಹಾನಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಚಿತ್ರವನ್ನು ಕೂಡ ನೌಕಾಪಡೆಯೇ ಬಿಡುಗಡೆ ಮಾಡಿತ್ತು. ಹಡಗಿಗೆ ಹಾನಿಯಾಗಿರುವ ಕುರಿತು ಕೂಡ ಹೆಚ್ಚಿನ ಮಾಹಿತಿ ಕೋರಲಾಗಿದೆ ಎಂದು ಎಸ್‌ಪಿ ಪ್ರತಿಕ್ರಿಯಿಸಿದ್ದಾರೆ.

Advertisement

ಶಿಪ್ಪಿಂಗ್‌ ನಿರ್ದೇಶನಾಲಯಕ್ಕೂ ಪತ್ರ
ಐಎನ್‌ಎಸ್‌ ಕೊಚ್ಚಿ ಸಾಗಿರುವ ಮಾರ್ಗದಲ್ಲೇ ಮುಂಬಯಿಯಿಂದ ಪ.ಬಂಗಾಲದ ಹಾಲ್ಡಿಯಾಕ್ಕೆ ಸರಕು ಸಾಗಾಟ ನೌಕೆ ಸಂಚರಿಸಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ಶಿಪ್ಪಿಂಗ್‌ ಸಚಿವಾಲಯದ ನಿರ್ದೇಶನಾಲಯಕ್ಕೂ ಪತ್ರ ಬರೆಯಲಾಗಿದೆ ಎಂದು ಎಸ್‌ಪಿ ಪ್ರತಿಕ್ರಿಯಿಸಿದ್ದಾರೆ.

“ಪರಿಹಾರ ಬೇಡ; ಮೊದಲು
ನಮ್ಮವರನ್ನು ಹುಡುಕಿಕೊಡಿ’
ಮಲ್ಪೆ: ಸುವರ್ಣ ತ್ರಿಭುಜ ಮುಳುಗಿರುವುದನ್ನು ಐಎನ್‌ಎಸ್‌ ನಿರೀಕ್ಷಕ ಪತ್ತೆಹಚ್ಚಿದೆಯಾದರೂ ಅದನ್ನು ಮೇಲೆತ್ತುವುದು ಯಾವಾಗ ಮತ್ತು ಯಾರು ಎನ್ನುವುದು ಪ್ರಶ್ನೆಯಾಗಿದೆ. ಈ ಮಧ್ಯೆ ರಾಜ್ಯ ಸರಕಾರ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡಲು ಮುಂದಾಗಿದೆಯಾದರೂ ಮೀನುಗಾರರ ಕುಟುಂಬ ನಮ್ಮವರನ್ನು ಹುಡುಕಿಕೊಡಿ ಎಂದು ಆಗ್ರಹಿಸುತ್ತಿದೆ.

ನಾಪತ್ತೆಯಾಗಿರುವ ಭಟ್ಕಳ ಅಳ್ವೆಕೋಡಿಯ ಹರೀಶ್‌ (23) ಅವರ ಮಾವ ಪಾಂಡು ಅವರು ಹೇಳುವಂತೆ ಜೀವನ ನಿರ್ವಹಣೆಗಾಗಿ ಪರಿಹಾರವಾದರೆ ಸರಿ. ಮೃತರಾಗಿದ್ದಾರೆ ಎಂಬ ನಿಟ್ಟಿನಲ್ಲಿ ಪರಿಹಾರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.

ಮೇ 16ರಂದು ಮಲ್ಪೆ ಮೀನುಗಾರ ಸಂಘದವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಿದೇªವೆ ಎಂದರು.

ಸ್ವಂತ ಮನೆಯೇ ಇಲ್ಲ
ಹರೀಶ್‌ ಕುಟುಂಬಕ್ಕೆ ಸ್ವಂತ ಮನೆಯೇ ಇಲ್ಲ. ಮಾವ ಪಾಂಡುರಂಗ ಅವರ ಮನೆಯಲ್ಲೇ ಇಡೀ ಕುಟುಂಬ ವಾಸವಾಗಿದೆ. ತಂದೆ ಶನಿಯಾರ್‌ ಮೊಗೇರ್‌ ಮತ್ತು ತಾಯಿ ಧನವಂತಿ ಮೀನು ಮಾರಿ ಜೀವನ ಸಾಗಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next