Advertisement

ಮಲ್ಪೆ ಬೀಚ್‌: ಇಬ್ಬರ ರಕ್ಷಣೆ ; ಮುಂದುವರಿದ ಜನಸಂದಣಿ

12:20 AM Jun 06, 2022 | Team Udayavani |

ಮಲ್ಪೆ : ವಾರಾಂತ್ಯ ಹಾಗೂ ಬಿಸಿಲಿನ ವಾತಾರಣದ ಹಿನ್ನೆಲೆಯಲ್ಲಿ ಶನಿವಾರ ಮತ್ತು ರವಿವಾರ ಮಲ್ಪೆ ಬೀಚ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ಸ್ಥಳೀಯರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ದೇವಸ್ಥಾನದ ಪ್ರವಾಸದ ಜತೆಗೆ ಮಲ್ಪೆ ಬೀಚ್‌ಗೂ ಜನರು ಕುಟುಂಬ ಸಮೇತರಾಗಿ ಬಂದು ಸಮುದ್ರದಲ್ಲಿ ಆಟವಾಡಿ ಸಂಭ್ರಮಪಟ್ಟರು.

Advertisement

ಇದೇ ವೇಳೆ ಬೀಚ್‌ನಲ್ಲಿ ಆಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ರಕ್ಷಿಸಲಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಬಂದರೆ ಬೀಚ್‌ ಕಡೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಬಂದರೆ ಇನ್ನು ಕೆಲವರು ಸೈಂಟ್‌ ಮೆರೀಸ್‌ಗೆಂದು ಬಂದವರು ಅಲ್ಲಿ ಬೋಟು ಯಾನ ಇಲ್ಲವೆಂದು ಗೊತ್ತಾಗಿ ಬೀಚ್‌ ಕಡೆಗೆ ಬರುತ್ತಿದ್ದಾರೆ ಎನ್ನಲಾಗಿದೆ. ರವಿವಾರ ಮಧ್ಯಾಹ್ನದ ಬಳಿಕ ಪ್ರವಾಸಿಗರ ವಾಹನಗಳು ಮಲ್ಪೆ ಕಡೆಗೆ ಅಗಮಿಸಿದ್ದು, ವಾಹನಗಳ ಸರತಿ ಸಾಲುಗಳು ಕಂಡು ಬಂದವು. ಆದಿಉಡುಪಿ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಇಬ್ಬರು ಯುವಕರ ರಕ್ಷಣೆ
ಮಲ್ಪೆ ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಉತ್ತರ ಕರ್ನಾಟಕದವರೆನ್ನಲಾದ ಇಬ್ಬರನ್ನು ರಕ್ಷಿಸಿದ ಘಟನೆ ನಡೆದಿದೆ. ರವಿವಾರ ಮಧ್ಯಾಹ್ನ ಉತ್ತರ ಕರ್ನಾಟಕದವರೆನ್ನಲಾದ ನಾಲ್ವರು ಬೀಚ್‌ಗೆ ಬಂದಿದ್ದು ನೀರಿಗಿಳಿದು ಚೆಂಡಾಟ ಆಡುತ್ತಿದ್ದರು. ಜೀವರಕ್ಷಕರು ಎಚ್ಚರಿಕೆಯನ್ನು ನೀಡಿದ್ದರೂ ಆದನ್ನು ಕೇಳಿಸದೇ ಆಟದಲ್ಲಿ ನಿರತರಾಗಿದ್ದರು. ಆಡುತ್ತ ಮುಂದೆ ಹೋದ ಇಬ್ಬರೂ ನೀರಿನ ಸೆಳೆತಕ್ಕೆ ಸಿಕ್ಕರು. ತತ್‌ಕ್ಷಣ ಜೀವರಕ್ಷಕರು ನೀರಿಗಿಳಿದು ಈ ಇಬ್ಬರನ್ನು ರಕ್ಷಿಸಿದ್ದಾರೆ.

ಸುಳಿಯಾಕಾರದಲ್ಲಿ ಅಲೆ
ಮಲ್ಪೆ ಬೀಚ್‌ನಲ್ಲಿ ಈ ಬಗ್ಗೆ ಹಲವು ಸಲ ಲೈಫ್‌ಗಾರ್ಡ್‌ ಎಚ್ಚರಿಕೆ ನೀಡಿದರೂ ಪ್ರವಾಸಿಗರೂ ನಿರ್ಲಕ್ಷ್ಯ ಮಾಡುತ್ತಿದ್ದರೆ. ಕಡಲಿಗಿಳಿಯದಂತೆ ಬುದ್ದಿವಾದ ಹೇಳಲು ಬಂದರೆ ಜೀವರಕ್ಷರಿಗೆ ಜೋರು ಮಾಡುತ್ತಾರೆ. ಚಂಡಮಾರುತದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಕೆಲವು ಕಡೆ ಹೊಂಡಗಳು ಬಿದ್ದಿವೆ. ಆ ಭಾಗದಲ್ಲಿ ಸುಳಿಯಾಕಾರದಲ್ಲಿ ಅಲೆಗಳು ಏಳುತ್ತವೆ. ಅದು ಅಪಾಯಕಾರಿ ಸ್ಥಳವೆಂದು ಪ್ರವಾಸಿಗರಿಗೆ ಗೊತ್ತಾಗುವುದಿಲ್ಲ ಎನ್ನುತ್ತಾರೆ ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next