Advertisement

ಮಲ್ಪೆ-ಬೀಚ್‌ ಉತ್ಸವ; ಇನ್ನೊಂದು ತಿಂಗಳು ಜಲ ಸಾಹಸ ಚಟುವಟಿಕೆ

03:53 PM Jan 24, 2023 | Team Udayavani |

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ ನೀಡಲು ಮತ್ತು ರಜತೋತ್ಸವನ್ನು ಅರ್ಥಪೂರ್ಣವಾಗಿಸಲು ಮೂರು ದಿನಗಳ ಕಾಲ ಮಲ್ಪೆ, ಸೈಂಟ್‌ಮೇರೀಸ್‌ ದ್ವೀಪದಲ್ಲಿ ನಡೆದ ಬೀಚ್‌ ಉತ್ಸವದ ಆಕರ್ಷಣೀಯ ಸಾಹಸ ಚಟುವಟಿಕೆಗಳು ಮುಂದಿನ ಒಂದು ತಿಂಗಳು ಪ್ರವಾಸಿಗರಿಗೆ ಲಭ್ಯವಿರಲಿದೆ.

Advertisement

ಕ್ಲಿಪ್‌ ಡೈವ್‌, ಫ್ಲೆ„ ಬೋರ್ಡ್‌, ಸ್ಕೂಬಾ ಡೈವ್‌, ಸ್ಲಾಕ್‌ಲೈನ್‌ ಮೊದಲಾದ ಸಾಹಸ ಚಟುವಟಿಕೆಯ ಜತೆಗೆ ಐಶಾರಾಮಿ ಯಾಚ್‌ ಸೇವೆಯ ಅನುಭವನ್ನು ಪ್ರವಾಸಿಗರು ಮಲ್ಪೆ ಪರಿಸರದಲ್ಲಿ ಪಡೆಯಬಹುದಾಗಿದೆ. ಮುಂಬಯಿಯಿಂದ ಆಗಮಿಸಿದ ವಿಹಾರ ನೌಕೆ (ಯಾಚ್‌) ಈಗ ಮಲ್ಪೆ ಸಮುದ್ರತೀರದಲ್ಲಿ ವಿಹರಿಸುತ್ತಿದೆ. ಇದು ಮುಂದಿನ ಒಂದು ತಿಂಗಳು ಮಲ್ಪೆ ಸಮುದ್ರ ತೀರದಲ್ಲಿ ಇದ್ದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಇದರಲ್ಲಿ ವಿಹಾರ ಮಾಡಬಹುದಾಗಿದೆ.

ಇದರೊಳಗೆ ಎರಡು ಮಲಗುವ ಕೊಠಡಿ, ಅಡುಗೆ ಕೋಣೆ, ಸ್ನಾನದ ಕೊಠಡಿ, ಊಟದ ಕೊಠಡಿ ಅಲ್ಲದೆ ಹುಟ್ಟು ಹಬ್ಬ ಇನ್ನಿತರ ಸಣ್ಣ ಸಮಾರಂಭಕ್ಕೆ 14 ಮಂದಿ ಕುಳಿತುಕೊಳ್ಳಬಹುದಾದ ಮಿನಿಹಾಲ್‌ ಇದೆ.

ವಿವಿಧ ರೀತಿಯ ಸಮಯಕ್ಕೆ ಅನು ಗುಣವಾಗಿ ವಿವಿಧ ಬೆಲೆಗಳಲ್ಲಿ ಯಾಚ್‌ ಸೇವೆ ಲಭ್ಯವಿರಲಿದೆ. ಇದರ ಜತೆಗೆ ಹಲವು ಸಾಹಸ ಚಟುವಟಿಕೆಗಳು ಇಲ್ಲಿವೆ. ಪ್ರವಾಸಿಗರಿಗೆ ದಿನಪೂರ್ತಿ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಲ್ಪೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುದೇಶ್‌ ಶೆಟ್ಟಿಯವರು ಮಾಹಿತಿ ನೀಡಿದರು.

ಸಾಹಸ ಚಟುವಟಿಕೆ
ಕ್ಲಿಪ್‌ಡೈವ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಸಾಹಸ ಚಟುವಟಿಕೆ. ಸದ್ಯ ಭಾರತದ ಕೆಲವೇ ಕೆಲವು ಭಾಗದಲ್ಲಿ ಮಾತ್ರ ಇದೆ. ಈಗ ಮಲ್ಪೆಯ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಅತ್ಯಂತ ಸುರಕ್ಷಿತ ವ್ಯವಸ್ಥೆಯೊಂದಿಗೆ ಕ್ಲಿಪ್‌ಡೈವ್‌ ಚಟುವಟಿಕೆ ನಡೆಯುತ್ತಿದೆ. ಸುಮಾರು 25 ಅಡಿ ಎತ್ತರದಿಂದ ಸಮುದ್ರಕ್ಕೆ ಹಾರಬಹುದಾದ ವ್ಯವಸ್ಥೆ ಮಾಡಲಾಗಿದೆ.

Advertisement

ರಾಷ್ಟ್ರೀಯ ಮಟ್ಟದ ತರಬೇತುದಾರರು ಮಾರ್ಗದರ್ಶನ ಮಾಡಲಿದ್ದಾರೆ. ಸ್ಕೂಬಾ ಡೈವ್‌ ನೇತ್ರಾಣಿ ಗುಡ್ಡದ ಕೆಳಭಾಗದಲ್ಲಿ ಹಿಂದಿನಿಂದಲೂ ನಡೆಯುತ್ತಿದೆ. ಈಗ ಸೈಂಟ್‌ ಮೇರೀಸ್‌ ದ್ವೀಪ ಹಾಗೂ ಕಾಪುವಿಗೂ ಬಂದಿದೆ. ಈ ಪ್ರದೇಶ ಸ್ಕೂಬಾ ಡೈವ್‌ಗೆ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ. ವಿಶೇಷವೆಂದರೆ ಈಜಲು ಅರಿಯದವರು ಸ್ಕೂಬಾಡೈವ್‌ ಮಾಡಬಹುದಾಗಿದೆ. ಫ್ಲೈಬೋರ್ಡ್‌ ಕರ್ನಾಟಕದ ಕರಾವಳಿಗೆ ಹೊಸ ಚಟುವಟಿಕೆ. ವಿದೇಶಗಳಲ್ಲಿ ವಿಶೇಷ ಆಕರ್ಷಣೀಯ ಚಟುವಟಿಕೆ ಇದಾಗಿದ್ದು, ನೀರಿಂದ ಮೇಲೇದ್ದು ಪುನಃ ಕೆಳಗೆ ಬರುವುದು ಹೀಗೆ ಹತ್ತಾರು ಆಯಾಮಗಳು ಇದರಲ್ಲಿವೆ. ಇದು ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಗೆ ಮುಕ್ತವಾಗಿದೆ. ಸ್ಲಾಕ್‌ ಲೈನ್‌(ಹಗ್ಗದ ಮೇಲೆ ನಡಿಗೆ) ಇದು ಸೈಂಟ್‌ ಮೇರೀಸ್‌ ಐಲ್ಯಾಂಡ್‌ನ‌ಲ್ಲಿದೆ. ಎರಡು ಕಡೆಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ಸಹಿತ ವಿವಿಧ ಚಟುವಟಿಕೆಗಳು ನಿರಂತರವಾಗಿರಲಿದೆ.

ಒಂದು ತಿಂಗಳು ಮುಂದುವರಿಯಲಿದೆ
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಉತ್ಸವದ ಸಂದರ್ಭದಲ್ಲಿ ಆಯೋಜಿಸಿರುವ ವಿವಿಧ ಸಾಹಸ ಚಟುವಟಿಕೆಗಳು ಮುಂದಿನ ಒಂದು ತಿಂಗಳು ಇರಲಿದೆ. ಅಲ್ಲದೆ, ಸ್ಥಳೀಯರಿಗೆ ಇದರ ತರಬೇತಿಯನ್ನು ನೀಡಲಿದ್ದೇವೆ. ಉದ್ಯೋಗದ ಜತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಅತಿ ಮುಖ್ಯ.
-ರಘುಪತಿ ಭಟ್‌, ಶಾಸಕ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next