Advertisement

ಮಲ್ಪೆ; ಲಂಗರು ಹಾಕಿದ ಬೋಟ್‌ಗಳಿಗೆ ಸುರಕ್ಷೆಯೇ ಇಲ್ಲ

05:50 PM Feb 20, 2024 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಖಾಲಿ ಮಾಡುವ ಮತ್ತು ಲಂಗರು ಹಾಕುವ ಸಮಯದಲ್ಲಿ ಬೋಟ್‌ಗಳನ್ನು ಹಗ್ಗದ ಸಹಾಯ ದಿಂದ ಕಟ್ಟಲು ಜೆಟ್ಟಿಯಲ್ಲಿ ಅಳವಡಿಸಲಾದ ಗೂಟಗಳು (ಬೊಲಾರ್ಡ್‌) ಹಾನಿಗೊಂಡು ಹಲವಾರು ವರ್ಷಗಳೇ ಕಳೆದರೂ ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕಂಡಿಲ್ಲ.

Advertisement

ಬಂದರಿನ 1 ಮತ್ತು 2ನೇ ಹಂತದ ಜೆಟ್ಟಿ ಹಾಗೂ ಪಶ್ಚಿಮ ದಿಕ್ಕಿನಲ್ಲಿರುವ ಜೆಟ್ಟಿಯಲ್ಲಿ ಸೇರಿದಂತೆ ಸುಮಾರು 50 ಗೂಟಗಳು ಹಾನಿಗೊಂಡಿವೆ. ಇದರಿಂದಾಗಿ ಮೀನುಗಾರರು ಬೋಟ್‌ಗಳನ್ನು ಜೆಟ್ಟಿಯಲ್ಲಿ ಸುರಕ್ಷಿತವಾಗಿ ಇಡಲು ಸಂಕಷ್ಟ ಪಡುತ್ತಿದ್ದಾರೆ.

ಮೊದಲ ಮತ್ತು ಎರಡನೆಯ ಹಂತದ ಜೆಟ್ಟಿ ನಿರ್ಮಾಣವಾಗಿ ಸುಮಾರು 45 ವರ್ಷ ಕಳೆದಿದ್ದು ಆ ವೇಳೆ ಇಲ್ಲಿ ಬೋಟನ್ನು ಕಟ್ಟಲು ಗೂಟವನ್ನು ನಿರ್ಮಿಸಲಾಗಿತ್ತು. ಪಶ್ಚಿಮ ಬದಿಯಲ್ಲಿರುವ ಜೆಟ್ಟಿಯನ್ನು ಆ ಬಳಿಕ ನಿರ್ಮಾಣ ಮಾಡಲಾಗಿತ್ತು. ಇದೀಗ ಎರಡೂ ಬದಿಯ ಜೆಟ್ಟಿಯ ಸ್ಲ್ಯಾಬ್‌ಗಳು ಹಾನಿಗೊಂಡು ಗೂಟಗಳು ಕಳಚಿ ಹೋಗಿದ್ದರೆ ಇನ್ನು ಕೆಲವೆಡೆ ಗೂಟಗಳು ಸಂಪೂರ್ಣ ಹಾನಿಕೊಂಡಿದೆ.

ಸಮುದ್ರ ಪಾಲಾಗುವ ಭೀತಿ 
ಮಲ್ಪೆ ಬಂದರಿನಲ್ಲಿ ಸುಮಾರು 2500 ಬೋಟ್‌ಗಳಿದ್ದು ಇಲ್ಲಿ ಲಂಗರು ಹಾಕುವುದೇ ದೊಡ್ಡ ಸಮಸ್ಯೆಯಾಗಿದೆ. ಒಂದೊಂದು
ಗೂಟದಲ್ಲಿ 20ರಿಂದ 25 ಬೋಟ್‌ಗಳನ್ನು ಹಗ್ಗದಿಂದ ಕಟ್ಟಲಾಗುತ್ತಿದೆ. ಇದೀಗ ಇಲ್ಲಿ ಬೋಟ್‌ಗಳಿಗೆ ಸುರಕ್ಷೆ ಇಲ್ಲದೆ ಸಮುದ್ರದ ಉಬ್ಬರ ವೇಳೆ ಬೋಟ್‌ಗಳು ಯಾವುದೇ ಆಧಾರ ಇಲ್ಲದೆ ಹಿಂದಕ್ಕೆ ಚಲಿಸಿ ಸಮುದ್ರ ಪಾಲಾಗುವ ಮೂಲಕ ಅವಘಡಕ್ಕೆ ಕಾರಣವಾಗುತ್ತಿದೆ.

ಮಲ್ಪೆ ಬಂದರಿನಲ್ಲಿ ಈಗಾಗಲೇ ಇಂತಹ ಪ್ರಕರಣಗಳು ಸಾಕಷ್ಟು ನಡೆದಿದೆ. ಗೂಟ ಸಿಗದ ಹೆಚ್ಚಿನ ಬೋಟ್‌ಗಳು ಮತ್ತೂಂದು ಬೋಟ್‌ಗೆ ಆಧಾರವಾಗಿ ಹಗ್ಗವನ್ನು ಕಟ್ಟಿ ಲಂಗರು ಹಾಕಿದರೂ ಆ ಬೋಟಿಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲದೆ ಒಂದಕ್ಕೊಂದು ತಾಗಿ ಸಾಕಷ್ಟು ಹಾನಿಗೊಳಗಾಗುತ್ತಿದೆ ಎನ್ನುತ್ತಾರೆ ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ ಅವರು.

Advertisement

ತಿಂಗಳೊಳಗೆ ಕಾಮಗಾರಿ ಆರಂಭ
ರಾಜ್ಯ ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ ಅವರು ಮಲ್ಪೆ ಬಂದರಿಗೆ ಭೇಟಿ ನೀಡಿ ಬಂದರು ಪರಿಶೀಲನೆ ನಡೆಸಿದ್ದಾರೆ. ಬಂದರಿನ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಂದರು ಮತ್ತು ಮೀನುಗಾರಿಕೆ ಇಲಾಖೆ ಈಗಾಗಲೇ ಬಂದರು ಪರಿಶೀಲನೆ ನಡೆಸಿ ಜೆಟ್ಟಿಯಲ್ಲಿ ಎಲ್ಲೆಲ್ಲಿ ಬೊಲಾರ್ಡ್‌ ಗಳು ಹಾನಿಯಾಗಿದೆ ಅದೆಲ್ಲವನ್ನು ಗುರುತಿಸಿ ಅಂದಾಜು ಪಟ್ಟಿಯನ್ನು ತಯಾರಿಸಿ, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯ ನಿರ್ವಾಹಕರಿಗೆ ಸಲ್ಲಿಸಲಾಗಿದೆ. ಸರಕಾರದಿಂದ ಅನುದಾನ ಬಿಡುಗಡೆಯಾದ ತತ್‌ಕ್ಷಣ ಕಾಮಗಾರಿಯನ್ನು ಆರಂಭಿಸಲಾಗುವುದು, ಈ ಬಗ್ಗೆ ಪ್ರಕ್ರಿಯೆಗಳು
ನಡೆಯುತ್ತಿದ್ದು ತಿಂಗಳೊಳಗೆ ಕಾಮಗಾರಿ ಆರಂಭಗೊಳ್ಳಲಿದೆ ಈ ಬಗ್ಗೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಮನವಿ
ಬೋಟ್‌ ಕಟ್ಟುವ ಗೂಟಗಳು ಹಾನಿಗೊಂಡು ಬೋಟ್‌ ಮಾಲಕರಿಗೆ ಬಹಳ ಸಮಸ್ಯೆಯಾಗಿದೆ. ಈಗಾಗಲೇ ಮೀನುಗಾರಿಕೆ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಕಳೆದ ವಾರ ಮೀನುಗಾರಿಕ ಸಚಿವರು ಬಂದರಿಗೆ ಬಂದ ವೇಳೆ ಅವರ ಗಮನಕ್ಕೂ ತರಲಾಗಿದ್ದು ತತ್‌ಕ್ಷಣ ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ.
-ದಯಾನಂದ ಕೆ. ಸುವರ್ಣ, ಅಧ್ಯಕ್ಷರು,
ಮೀನುಗಾರರ ಸಂಘ

*ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next