Advertisement

ಮಲ್ಪೆ: ಅಪರೂಪದ ಹಾರುವ ಹಾವು ಪ್ರತ್ಯಕ್ಷ…!

09:51 PM Mar 29, 2019 | sudhir |

ಮಲ್ಪೆ: ಸಾಮಾನ್ಯವಾಗಿ ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಅಪರೂಪದ ಹಾರುವ ಹಾವು ಗೋಲ್ಡನ್‌ ಟ್ರೀ ಸ್ನೇಕ್‌ ಇತ್ತೀಚೆಗೆ ಮಲ್ಪೆಯ ಹೊಟೇಲ್‌ ಒಂದರಲ್ಲಿ ಪತ್ತೆಯಾಗಿದ್ದು ಬಹಳಷ್ಟು ಜನರ ಕುತೂಹಲಕ್ಕೂ ಕಾರಣವಾಗಿದೆ.

Advertisement

ಮರದಿಂದ ಮರಕ್ಕೆ ಹಾರುವ ಹಾವು ಇದಾಗಿದ್ದು, ಇದರ ವೈಜ್ಞಾನಿಕ ಹೆಸರು ಕೈಸೋಪೆಲಿಯ ಆರೆ°àಟ, ಕನ್ನಡದಲ್ಲಿ ಹಾರುವ ಹಾವು, ತುಳುವಿನಲ್ಲಿ ಪಲ್ಲೀಪುತ್ರ ಎಂದು ಕರೆಯುತ್ತಾರೆ.

ಮಲ್ಪೆಯ ಹೊಟೇಲ್‌ ಒಂದರಲ್ಲಿ ಕಾಣಸಿಕ್ಕ ಹಾವು ತರಕಾರಿ ಖರೀದಿಸಿದ ಬುಟ್ಟಿಯಿಂದ ಬಂದಿದೆ ಎನ್ನಲಾಗಿದೆ.

ಹೊಟೇಲಿನವರು ಮಲ್ಪೆ ಕೊಳದ ಉರಗ ಪ್ರೇಮಿ ಬಾಬು ಸಾಲ್ಯಾನ್‌ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಬಾಬು ಸಾಲ್ಯಾನ್‌ ಅವರು ಹಾವನ್ನು ಹಿಡಿದು ಉರಗತಜ್ಞ ಗುರುರಾಜ್‌ ಸನಿಲ್‌ ಅವರಿಗೆ ಒಪ್ಪಿಸಿದ್ದಾರೆ. ಗುರುರಾಜ್‌ ಸನಿಲ್‌ ಅವರು ಹಾವನ್ನು ಸುರಕ್ಷಿತವಾಗಿ ಪಶ್ಚಿಮಘಟ್ಟದ ಅರಣ್ಯಕ್ಕೆ ಬಿಟ್ಟಿದ್ದಾರೆ.

ವೃಕ್ಷವಾಸಿ ಜೀವಿ
ಹೆಚ್ಚಾಗಿ ಮರದಲ್ಲಿ ವಾಸಿಸುವ ಹಗಲು ವಾಸಿ ಹಾವು ಇದಾಗಿದ್ದು, ಇದು ಪಕ್ಷಿಗಳಂತೆ ಹಾರುವುದಿಲ್ಲ, ಮರದಿಂದ ಮರಕ್ಕೆ ಕೆಳಮುಖವಾಗಿ ನೆಗೆಯುತ್ತದೆ. ಬೇಟೆಗೆ, ಶತ್ರುಗಳ ರಕ್ಷಣೆ ಪಡೆಯಲು ತನ್ನ ಶರೀರವನ್ನು ಬಾಣದಂತೆ ಹದಗೊಳಿಸಿ ಜಿಗಿಯುವ ಕಲೆಗಾರಿಕೆ ಪ್ರಕೃತಿಯ ವಿಸ್ಮಯ ಎನ್ನುತ್ತಾರೆ ಗುರುರಾಜ್‌ ಸನಿಲ್‌. ಈ ಹಾವು ಗರಿಷ್ಠ ಒಂದೂವರೆ ಮೀ.ನಷ್ಟು ಉದ್ದ ಬೆಳೆಯುತ್ತದೆ. ಇದರಲ್ಲಿ ಹೆಣ್ಣು ಹಾವು ದೊಡ್ಡದಾಗಿರು ತ್ತದೆ. ಇದರ ಮೈಮೇಲೆ ಕೆಂಪು, ಹಳದಿ, ಕಪ್ಪು, ತಿಳಿ ಹಸಿರು ಬಣ್ಣಗಳ ಪಟ್ಟಿ ಇದೆ.

Advertisement

ಮಲೆನಾಡಿನಿಂದ ಕರಾವಳಿಗೆ ಹೇಗೆ ಬಂತು ?
ತನ್ನ ಹಲವು ವರ್ಷಗಳ ಹಾವಿನ ಒಡನಾಟದಲ್ಲಿ ಇದೇ ಮೊದಲ ಬಾರಿಗೆ ಈ ಮಲ್ಪೆ ಪರಿಸರದಲ್ಲಿ ಇದನ್ನು ಕಾಣುತ್ತಿದ್ದೇವೆ ಮರದಲ್ಲಿ ಹೆಚ್ಚು ವಾಸ ವಿರುವ ಈ ಹಾವು ಕರಾವಳಿ ತೀರ ಪ್ರದೇಶಗಳಲ್ಲಿ ಕಂಡುಬರುವುದು ವಿರಳ.

ಮಲೆನಾಡು ಪ್ರದೇಶಗಳಿಂದ ತರಕಾರಿ ವಾಹನ ಬರುತ್ತಿರುವಾಗ ಮರದಿಂದ ಮರಕ್ಕೆ ಹಾರುವ ವೇಳೆ ಆಯ ತಪ್ಪಿ ವಾಹನಕ್ಕೆ ಸೇರಿರುವ ಸಾಧ್ಯತೆ ಇದೆ. ಹೀಗೆ ತರಕಾರಿಯೊಳಗೆ ಸೇರಿ ಅಂಗಡಿಯ ಮೂಲಕ ಹೊಟೇಲಿಗೆ ಬಂದಿರಬಹುದು ಎನ್ನುತ್ತಾರೆ ಗುರುರಾಜ್‌ ಸನಿಲ್‌.

ಇದು ವಿಷದ ಹಾವಲ್ಲ
ಹಾವಿನ ಬಣ್ಣನೋಡಿ ಇದು ವಿಷದ ಹಾವು ಎಂದು ಭಾವಿಸಬಾರದು, ಇದು ವಿಷ ರಹಿತ ಹಾವು. ಕೆಲವರು ತಪ್ಪಾಗಿ ಅರ್ಥೈಸಿ ಗೊಂದಲಗೊಂಡು ವಿಷಕಾರಿ ಕಡಂಬಳ ಎಂದು ಕೊಲ್ಲುವ ಸಾಧ್ಯತೆ ಇದೆ. ಹಲ್ಲಿ, ಹಕ್ಕಿಗಳ ಮೊಟ್ಟೆ, ಸಣ್ಣಪುಟ್ಟ ಸಸ್ತನಿ, ಓತಿಕ್ಯಾತ, ಹಕ್ಕಿಗಳುಇದರ ಆಹಾರವಾಗಿದೆ. ಈ ಹಾವು ಮಾರ್ಚ್‌, ಏಪ್ರಿಲ್‌ ತಿಂಗಳ ಸಮಯದಲ್ಲಿ ಮಿಲನಗೊಂಡು ಜೂನ್‌-ಜುಲೈ ತಿಂಗಳ ವೇಳೆ ಮರದ ಪೊಟರೆಗಳಲ್ಲಿ 6ರಿಂದ 12 ಮೊಟ್ಟೆಯನ್ನಿಟ್ಟು ಮರಿ ಮಾಡುತ್ತದೆ.

-ಗುರುರಾಜ್‌ ಸನಿಲ್‌ ಉರಗ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next