Advertisement

ಶೌಚಾಲಯ, ಬೀದಿ ದೀಪಕ್ಕೆ ಉದ್ಘಾಟನೆ ಭಾಗ್ಯವಿಲ್ಲ

09:04 PM Jan 25, 2020 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಮೂರನೇ ಹಂತದ ಬಂದರಿನ ಬಾಪುತೋಟದ ಭಾಗದ ಬಂದರಿನ ರಸ್ತೆ ಬದಿಯಲ್ಲಿ ದಾರಿದೀಪ ಅಳವಡಿಸಿ ವರ್ಷ ನಾಲ್ಕು ಕಳೆದರೂ ಇನ್ನೂ ವಿದ್ಯುತ್‌ ಸಂಪರ್ಕವನ್ನು ನೀಡದ ಪರಿಣಾಮ ರಾತ್ರಿ ಹಾಗೂ ನಸುಕಿನ ವೇಳೆ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲು ಮೀನುಗಾರರು ತೊಂದರೆ ಅನುಭವಿಸುವಂತಾಗಿದೆ. ಮಾತ್ರವಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ ಬೋಟುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇಲ್ಲಿನ ದಾರಿದೀಪಗಳು ನಾಮ್‌ಕೆವಾಸ್ತೆಗೆ ಇದ್ದಂತಿದೆ. ವಿದ್ಯುತ್‌ ಸಂಪರ್ಕ ಇಲ್ಲದೆ ಜನ ಸಾಮಾನ್ಯರಿಗೆ ಪ್ರಯೋಜನ ಇಲ್ಲದಂತಾಗಿದೆ.

Advertisement

ಅಪಾಯಕ್ಕೆ ಆಹ್ವಾನ
ಬಾಪುತೋಟದ ಬಳಿ ಇರುವ ಸ್ಲಿಪ್‌ವೇಯಿಂದ ಹಿಡಿದು ಸೇತುವೆ ಸಂಪರ್ಕದವರೆಗೆ ಸುಮಾರು 32ಮೆಟಲ್‌ ಲೈಟ್‌, ಸ್ಲಿಪ್‌ವೇ ಬಳಿ ಒಂದು ಹೈಮಾಸ್ಟ್‌ ದೀಪವನ್ನು ಅಳವಡಿಸಲಾಗಿದೆ. ದೀಪಗಳು ಉರಿಯದ ಕಾರಣ ರಾತ್ರಿ ವೇಳೆ ಮೀನುಗಾರಿಕೆ ಬೋಟನ್ನು ದಕ್ಕೆಯಲ್ಲಿ ಲಂಗರು ಹಾಕಲು ಅಥವಾ ತೆರವುಗೊಳಿಸಲು ಮೀನುಗಾರರಿಗೆ ತೊಂದರೆಯಾಗುತ್ತಿದೆ. ಮಾತ್ರವಲ್ಲದೆ ಕತ್ತಲಲ್ಲಿ ದಕ್ಕೆಯಲ್ಲಿ ನಡೆದಾಡುವುದು ಕಷ್ಟ. ಆಯ ತಪ್ಪಿದರೆ ಹೊಳೆಗೆ ಬೀಳುವುದು ನಿಶ್ಚಿತ. ವಾಹನ ಸವಾರರೂ ಅಪಾಯವನ್ನು ಎದುರಿಸುವಂತಾಗಿದೆ..

ಉದ್ಘಾಟನೆಗೊಳ್ಳದ ಶೌಚಾಲಯ
3ನೇ ಹಂತದ ಯೋಜನೆಯಲ್ಲಿ ಮೀನುಗಾರರಿಗಾಗಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡಿದ್ದರೂ ಉಪಯೋಗಕ್ಕೆ ನೀಡದಿದ್ದುದರಿಂದ ಪಾಳು ಬಿದ್ದಂತಾಗಿದೆ.
ರಾತ್ರಿ ವೇಳೆ ಮೀನುಗಾರ ಕಾರ್ಮಿಕರು ಸಿಕ್ಕಸಿಕ್ಕಲ್ಲಿ ಮಲಮೂತ್ರ ಮಾಡಲು ಕುಳಿತುಕೊಳ್ಳುತ್ತಾರೆ. ಪಾಳುಬಿದ್ದ ಶೌಚಾಲಯ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಕಟ್ಟಡ ಬಣ್ಣ ಕಳೆದುಕೊಂಡಿದೆ.

ಪಡುಕರೆಗೂ ಪ್ರಮುಖ ರಸ್ತೆ
ಪಡುಕರೆ ಭಾಗವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೂ ಇದಾಗಿದ್ದು ರಾತ್ರಿ ಮತ್ತು ನಸುಕಿನ ವೇಳೆ ಮೀನುಗಾರಿಕೆ ಕೆಲಸಕ್ಕೆ ಬರುವ ಮಹಿಳೆಯರು ಬೀದಿ ದೀಪವಿಲ್ಲದೆ ಭಯದ ವಾತಾವರಣದಲ್ಲಿ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ವಾಹನ ಸವಾರರೂ ಇಲ್ಲಿ ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ತತ್‌ಕ್ಷಣ ಬಗೆಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಕ್ರಮ ಕೈಗೊಳ್ಳಲಿ
ಬಂದರಿನಲ್ಲಿ ಸುಮಾರು 400 ಬೋಟುಗಳನ್ನು ನಿಲ್ಲಿಸಲಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಸೊತ್ತುಗಳಿವೆ. ಕತ್ತಲಾದ್ದರಿಂದ ಕಳ್ಳರಿಗೆ ಬೋಟಿನ ಬಿಡಿ ಭಾಗಗಳನ್ನು ಕದ್ದೊಯ್ಯಲು ಅನುಕೂಲ ಮಾಡಿಕೊಟ್ಟಂತಾಗಿದೆ. ಸಂಬಂಧಪಟ್ಟ ಇಲಾಖೆ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು.
– ಶೇಖರ್‌ ಜಿ. ಕೋಟ್ಯಾನ್‌, ಬೋಟ್‌ ಮಾಲಕರು

Advertisement

ದಾರಿದೀಪ ಅಗತ್ಯ
ಪಡುಕರೆ ಭಾಗದಿಂದ ಮಲ್ಪೆಗೆ ಮೀನಿನ ಕೆಲಸಕ್ಕೆ ಪ್ರತಿನಿತ್ಯ ಸಾವಿರಾರು ಮಹಿಳೆಯರು ಮುಂಜಾವ 4ಗಂಟೆಗೆ ನಡೆದುಕೊಂಡು ಬರುತ್ತಾರೆ. ದಾರಿದೀಪ ಇಲ್ಲದ್ದರಿಂದ ಭಯದಿಂದಲೇ ನಡೆದಾಡುವಂತಾಗಿದೆ.
– ಬೂದ ಪೂಜಾರಿ, ಸ್ಥಳೀಯರು

ಕೆಲಸ ಬಾಕಿ ಇದೆ
ಎಲೆಕ್ಟ್ರಿಕಲ್‌ ವರ್ಕ್‌ ಮಾತ್ರ ಈಗಷ್ಟೇ ಹಸ್ತಾಂತರ ಆಗಿದೆ. ಉಳಿದವು ಆಗಿಲ್ಲ. ಪ್ರಸ್ತುತ ವಿದ್ಯುತ್‌ ಬಿಲ್‌ ಬಾಕಿ ಇದೆ ಅದನ್ನು ಇಲಾಖೆ ಪಾವತಿ ಮಾಡುತ್ತಿದೆ. ಕಾಂಟ್ರಾಕ್ಟ್ ವಹಿಸಿಕೊಂಡವರು ಶೌಚಾಲಯ ಕಟ್ಟಿದ್ದಾರೆ ಆದರೆ ನೀರಿನ ವ್ಯವಸ್ಥೆ ಮಾಡಿಲ್ಲ. ಓವರ್‌ ಹೆಡ್‌ ಟ್ಯಾಂಕ್‌ ಮಾಡಿ ಟ್ಯಾಪ್‌ ಮೂಲಕ ನೀರಿನ ಸರಬರಾಜಿನ ವ್ಯವಸ್ಥೆ ಕೆಲಸ ಆಗಬೇಕಾಗಿದೆ..
– ಗಣೇಶ್‌ ಕೆ., ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ

ನಟರಾಜ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next