Advertisement

ಬುಡಕಟ್ಟು ಮಹಿಳೆ, ಮಕ್ಕಳಲ್ಲಿ ಅಪೌಷ್ಟಿಕತೆ: ಕಳವಳ

04:51 PM Jun 11, 2022 | Team Udayavani |

ಚಾಮರಾಜನಗರ: ಅಪೌಷ್ಟಿಕತೆ ನಿರ್ಮೂಲನೆಗಾಗಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸತ್ತಲೇ ಬಂದಿದ್ದರೂ ಬುಡಕಟ್ಟು ಜನರ ಮಕ್ಕಳು ಹಾಗೂ ಮಹಿಳೆಯರಲ್ಲಿ ಅಪೌಷ್ಟಿಕತೆ ಕಂಡು ಬರುತ್ತಿರುವುದು ಕಳವಳಕಾರಿ ಸಂಗತಿ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹೇಳಿದರು.

Advertisement

ಬೆಂಗಳೂರಿನ ಇನ್ಸ್ಟಿಟ್ಯೂಟ್‌ ,ಪಬ್ಲಿಕ್‌ ಹೆಲ್ತ್ ಸಂಸ್ಥೆ, ಜೆ.ಎಸ್‌ಎಸ್‌ ಮೆಡಿಕಲ್‌ ಕಾಲೇಜು ಹಾಗೂ ಇಂಡಿಯನ್‌ ಇನ್ಸಿಟ್ಯೂಟ್ ಪಬ್ಲಿಕ್‌ ಹೆಲ್ತ್ ಸಂಸ್ಥೆ ಡಿಬಿಟಿ/ವೆಲ್ಕಮ್‌ ಟ್ರಸ್ಟ್‌ ಇಂಡಿಯಾ ಅಲಾಯನ್ಸ್‌ ಪ್ರಾಯೋಜಕತ್ವದಲ್ಲಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಬುಡಕಟ್ಟು ಜನಾಂಗಗಳ, ಆರೋಗ್ಯ ಸಮಸ್ಯೆಗಳು, ಅನುವಂಶಿಕ ರೋಗಗಳ ಕುರಿತು ಸಂಶೋಧನೆ, ಹೊಸ ಬದಲಾವಣೆ ಹಾಗೂ ತರಬೇತಿಗಳನ್ನೊಳಗೊಂಡ 5 ವರ್ಷಗಳ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಈ ರೀತಿಯ ಸಂಶೋಧನೆಗಳು ಹಾಗೂ ಹೊಸ ಪ್ರಯೋಗಗಳಿಂದ ಗಿರಿಜನರ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಬದಲಾವಣೆಗಳು ತರಲು ಸಾಧ್ಯವಿದೆ. ಈ ಹೊಸ ಯೋಜನೆಯಿಂದ ಚಾಮರಾಜನಗರ ಸೇರಿದಂತೆ ರಾಜ್ಯದ ಜನತೆಗೆಅದರಲ್ಲೂ ಬುಡಕಟ್ಟು ಜನರಿಗೆ ಉಪಯೋಗವಾಗಲಿದೆ ಎಂದರು. ಇನ್ಸ್ಟಿಟ್ಯೂಟ್‌ ಪಬ್ಲಿಕ್‌ ಹೆಲ್ತ್ ಸಂಸ್ಥೆ ಉಪನಿರ್ದೇಶಕ ಡಾ. ಎನ್‌.ಎಸ್‌. ಪ್ರಶಾಂತ್‌ ಮಾತನಾಡಿ, ಈ ಯೋಜನೆಯಡಿ ಬುಡಕಟ್ಟು ಜನಾಂಗದಲ್ಲಿನ ಆರೋಗ್ಯ ಸುಧಾರಣೆಗೆ ಸಂಬಂಧಪಟ್ಟಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಯೋಜನೆಯ ಅಂತ್ಯದಲ್ಲಿ ಚಾಮರಾಜನಗರ ಜಿಲ್ಲೆಗೆ ಸಿಕೆಲ್-ಸೆಲ್‌ ಅನೀಮಿಯಾ ಹಾಗೂ ಇತರೆ ರಕ್ತ ಸಂಬಂಧಿತ ಕಾಯಿಲೆಗಳ ಜನಸಂಖ್ಯೆ ಆಧಾರಿತ ಹಿಮೋಗ್ಲೋಬಿನೋಪತಿ ನೋಂದಣಿ ಸಾದ್ಯವಾಗುತ್ತದೆ ಎಂದರು. ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಮಾತನಾಡಿ, ಸಂಶೋಧನೆಗಳು ಕೇವಲ ಸಂಶೋಧಕರ ಜ್ಞಾನವೃದ್ಧಿಗೆ ಸೀಮಿತವಾಗದೇ ಸಮುದಾಯದ ಕಟ್ಟ ಕಡೇಯ ವ್ಯಕ್ತಿಗೆ ತಲುವುವಂತಿರಬೇಕು. ಅಲ್ಲದೇ
ಅದರ ಸಂಪೂರ್ಣ ಪ್ರಯೋಜನ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಿರಬೇಕು ಎಂದರು.

ಇಂಡಿಯನ್‌ ಇನ್ಸಿಟ್ಯೂಟ್ ಆಫ್ ಪಬ್ಲಿಕ್‌ ಹೆಲ್ತ್‌, ನಿರ್ದೇಶಕ ಡಾ. ಸುರೇಶ್‌ ಶಾಪೇಟಿ ಮಾತನಾಡಿ, ಗಿರಿಜನರ ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ಕಾರ್ಯಕ್ರಮ ಯಶಸ್ವಿಯಾಗಬೇಕಿದ್ದಲ್ಲಿ ಸಮುದಾಯ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವ ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು. ಮೈಸೂರಿನ ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜಿನ ಡಾ.ದೀಪಾ ಭಟ್‌, ಡಿಎಚ್‌ಒ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಸಿಮ್ಸ್‌ ನಿರ್ದೇಶಕ ಡಾ. ಸಕ್ಷಿಂಜೀವ್‌, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಅಧ್ಯಕ್ಷ ಡಾ. ಎಂ. ಜಡೇಗೌಡ, ಸಿಮ್ಸ್‌ನ ಡಾ.ಮಹೇಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next