ನವದೆಹಲಿ: ಭಾರತೀಯ ಬ್ಯಾಂಕುಗಳಿಗೆ ಕೋಟ್ಯಂತರ ರೂ. ವಂಚನೆ ಪ್ರಕರಣದಲ್ಲಿ ಬೇಕಾಗಿರುವ ವಿಜಯ್ ಮಲ್ಯ ಅವರನ್ನು ಯುಕೆಯಿಂದ ಭಾರತಕ್ಕೆ ಹಸ್ತಾಂತರಗೊಳಿಸುವ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿರುವುದರ ವಿರುದ್ಧ ಸುಪ್ರೀಂಕೋರ್ಟ್ ಕಿಡಿಕಾರಿದೆ.
ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾ. ಅರುಣ್ ಮಿಶ್ರಾ ಅವರುಳ್ಳ ನ್ಯಾಯಪೀಠ, “”ಮಲ್ಯ, ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಹಸ್ತಾಂತರ ತಡ ಆಗುತ್ತಿರುವುದೇಕೆ? ಕಳೆದೆಂಟು ತಿಂಗಳಿಂದ ಸುಪ್ರೀಂಕೋರ್ಟ್, ಆದೇಶಗಳನ್ನೂ ನೀಡುತ್ತಿದೆ. ವಿದೇಶಾಂಗ
ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡುತ್ತಿದೆ.ಆದರೂ, ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ನಿಮ್ಮ (ಸರ್ಕಾರ) ಉದ್ದೇಶವಾದರೂ ಏನು?” ಎಂದು ಆಕ್ಷೇಪಿಸಿತು.
ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಸಿಂಗ್ ಹಾಗೂ ಹಿರಿಯ ವಕೀಲ ವಿ. ಮೋಹನಾ ಅವರ ಉಪಸ್ಥಿತಿ ಬಗ್ಗೆಯೂ ಮಾತನಾಡಿದ ನ್ಯಾಯಪೀಠ, ಪ್ರತಿ ಕಲಾಪಕ್ಕೂ ಸರ್ಕಾರದ ಪರ ಬೇರೆ ಬೇರೆ ವಕೀಲರು ಬರುತ್ತಿದ್ದಾರೆ. ಆದರೆ, ಇವರ್ಯಾರೂ ಗಡಿಪಾರು ಕುರಿತಂತೆ ಆದ ಬೆಳವಣಿಗೆ ಬಗ್ಗೆ ಮಾಹಿತಿ ನೀಡುತ್ತಿಲ್ಲ” ಎಂದಿತು.