Advertisement

ಮಲ್ಯ ಗಡೀಪಾರಿಗೆ ಯುಕೆ ಸರಕಾರ ಒಪ್ಪಿಗೆ

12:30 AM Feb 05, 2019 | Team Udayavani |

ಲಂಡನ್‌: ಭಾರತೀಯ ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ವಂಚಿಸಿ ಲಂಡನ್‌ನಲ್ಲಿ ಅಡಗಿರುವ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಯು.ಕೆ. ಸರಕಾರ ಒಪ್ಪಿಗೆ ನೀಡಿದೆ. ಇದು ಕೇಂದ್ರದ ಎನ್‌ಡಿಎ ಸರಕಾರಕ್ಕೆ ಸಂದ ಮಹತ್ವದ ಜಯವಾಗಿದೆ. ಭ್ರಷ್ಟಾಚಾರಿಗಳು ಯಾವುದೇ ದೇಶದಲ್ಲಿ ಅಡಗಿದ್ದರೂ ಹುಡುಕಿ ಭಾರತಕ್ಕೆ ಕರೆತರುತ್ತೇವೆ ಎಂದು ಪದೇ ಪದೆ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ನೈತಿಕ ಬಲ ತಂದುಕೊಡಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

Advertisement

ಮಲ್ಯ ಹಸ್ತಾಂತರಕ್ಕಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇತೃತ್ವದ 17 ವಿವಿಚಧ ಭಾರತೀಯ ಬ್ಯಾಂಕುಗಳ ಒಕ್ಕೂಟವು ಹೂಡಿದ್ದ ದಾವೆಯ ವಿಚಾರಣೆ ನಡೆಸಿದ್ದ ಲಂಡನ್‌ನ ವೆಸ್ಟ್‌ ಮಿನ್‌ಸ್ಟರ್‌ ನ್ಯಾಯಾಲಯ, ಕಳೆದ ವರ್ಷ ಡಿ. 10ರಂದು ಮಲ್ಯ ಹಸ್ತಾಂತರಕ್ಕೆ ಆದೇಶಿಸಿತ್ತು. ಆದರೆ ಈ ಬಗ್ಗೆ ಯು.ಕೆ. ಇಲಾಖೆ ಅಂತಿಮ ತೀರ್ಮಾನ ಕೈಗೊಳ್ಳಬೇಕಾದ್ದರಿಂದ ಈ ಪ್ರಕರಣವನ್ನು ನ್ಯಾಯಾಲಯ, ಗೃಹ ಇಲಾಖೆಗೆ ವರ್ಗಾವಣೆ ಮಾಡಿತ್ತು. ನಿಯಮಗಳಂತೆ, ಇಂಥ ಪ್ರಕರಣವು ತನಗೆ ವರ್ಗಾವಣೆಗೊಂಡ ದಿನದಿಂದ 2 ತಿಂಗಳುಗಳ ಕಾಲಾವಧಿಯಲ್ಲಿ ಗೃಹ ಇಲಾಖೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದ್ದು, ಮಲ್ಯ ಪ್ರಕರಣ ದಲ್ಲಿ ಕಾಲಾವಧಿ ಫೆ. 10ಕ್ಕೆ ಮುಕ್ತಾಯ ವಾಗುವುದರಲ್ಲಿತ್ತು. ಆದರೆ ಅದಕ್ಕಿನ್ನೂ ಒಂದು ವಾರ ಬಾಕಿ ಇರು ವಾಗಲೇ, ಮಲ್ಯರ ಹಸ್ತಾಂತರಕ್ಕೆ ಗೃಹ ಇಲಾಖೆ ಒಪ್ಪಿಗೆ ನೀಡಿದೆ.

ಮಲ್ಯಗೆ ಬಚಾವಾಗಲು ಇನ್ನೊಂದು ಅವಕಾಶ?
ಯು.ಕೆ. ಗೃಹ ಇಲಾಖೆಯಿಂದ ಹಸ್ತಾಂ ತರಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿದ್ದರೂ, ಈ ನಿರ್ಧಾರದ ವಿರುದ್ಧವೇ ಮೇಲ್ಮನವಿ ಸಲ್ಲಿಸಲು ಮಲ್ಯ ಅವರಿಗೆ ಅವಕಾಶವಿದೆ. ಅತ್ತ, ಮಲ್ಯ ಭಾರತದಲ್ಲಿ ತಮಗೆ ಸಂಬಂಧಿಸಿದ 13,000 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ್ದು ಇದು ತಾವು ಬಾಕಿ ಉಳಿಸಿಕೊಂಡಿರುವ ಸಾಲಕ್ಕಿಂತ (9,000 ಕೋಟಿ ರೂ.) ಹೆಚ್ಚಾಗಿದೆ ಎಂದು ಗುಡುಗಿದ್ದಾರೆ. ಇದೇ ವಿಚಾರವನ್ನು ಅವರು ಮೇಲ್ಮನವಿಯಲ್ಲಿ ಉಲ್ಲೇಖೀಸಿ, ತಮ್ಮ ಗಡೀಪಾರು ಆದೇಶ ಹಿಂಪಡೆಯಲು ಕೋರಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next