ಮುಂಬಯಿ : ಸಾವಿರಾರು ಕೋಟಿ ರೂ. ಬ್ಯಾಂಕ್ ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿ ಈಗಿನ್ನು ಬ್ರಿಟನ್ ನಿಂದ ಭಾರತಕ್ಕೆ ಗಡೀಪಾರಾಗಲಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಇಲ್ಲಿನ ಪಿಎಂಎಲ್‌ಎ ನ್ಯಾಯಾಲಯ ಇಂದು ಶನಿವಾರ
‘ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸಿದೆ.
ನ್ಯಾಯಾಲಯದ ಈ ಘೋಷಣೆಯಿಂದಾಗಿ ಸರಕಾರ ಈಗಿನ್ನು ವಿಜಯ್ ಮಲ್ಯ ಅವರ ಎಲ್ಲ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.
ನ್ಯಾಯಾಲಯದ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ತನಗೆ ಸ್ವಲ್ಪ ಕಾಲಾವಕಾಶ ಬೇಕೆಂದು ಕೋರಿ ವಿಜಯ್ ಮಲ್ಯ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಲಯದ ಈ ಆದೇಶದಿಂದ ವಿಜಯ್ ಮಲ್ಯ ಅವರು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ದೇಶದ ಮೊದಲ ಉದ್ಯಮಿ ಎನಿಸಿಕೊಂಡಿದ್ದಾರೆ.
2018ರ ತಲೆ ಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳ ಕಾಯಿದೆಯಡಿ ವಿಜಯ್ ಮಲ್ಯ ಅವರನ್ನು ಆ ರೀತಿ ಘೋಷಿಸಲಾಗಿದೆ. ಮಲ್ಯ ಅವರನ್ನು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಘೋಷಿಸುವ ದಿಶೆಯಲ್ಲಿ ಸೂಕ್ತ ನಿರ್ದೇಶ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯದ ಅರ್ಜಿಯ ಮೇಲಿನ ವಿಚಾರಣೆಯನ್ನು ಮುಂಬಯಿಯಲ್ಲಿನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಮಲ್ಯ ಅವರನ್ನು ತಲೆ ಮರೆಸಿಕೊಂಡಿರುವ ಅಪರಾಧಿ ಎಂದು ಘೋಷಿಸಿದೆ.